×
Ad

ಸಚಿವರು ಪರಸ್ಪರ ಭೇಟಿಯಾಗುವ ಬಗ್ಗೆ ಅನುಮಾನ ಸರಿಯಲ್ಲ : ಸತೀಶ್ ಜಾರಕಿಹೊಳಿ

Update: 2025-01-31 21:01 IST

ಸತೀಶ್ ಜಾರಕಿಹೊಳಿ

ಬೆಂಗಳೂರು : ವಿಧಾನಸೌಧದಲ್ಲಿ ಕೆಲಸ ಮಾಡುವ ಸಚಿವರು ಪರಸ್ಪರ ಭೇಟಿಯಾಗುವ ಬಗ್ಗೆಯೂ ಅನುಮಾನ ಪಡುವುದು ಸರಿಯಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ವರು ಸಚಿವರು ಒಂದು ಕಡೆ ಸೇರುವುದು ಬೇಡವೇ?, ಜ.30ರ ಸಚಿವ ಸಂಪುಟ ಸಭೆಯ ಬಳಿಕ ಡಾ.ಜಿ.ಪರಮೇಶ್ವರ್ ಅವರ ಕಚೇರಿಯಲ್ಲಿ ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ ಮತ್ತು ನಾನು ಭೇಟಿಯಾಗಿರುವುದಕ್ಕೆ ನಾನಾ ರೀತಿಯ ವ್ಯಾಖ್ಯಾನಗಳನ್ನು ನೀಡಲಾಗುತ್ತಿದೆ. ಅಲ್ಲಿ ವಾಲ್ಮೀಕಿ ಪೀಠದ ಶ್ರೀಗಳು ಇದ್ದಿದ್ದನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾಲ್ಮೀಕಿ ಪೀಠದ ಶ್ರೀಗಳು ರಾಜಕೀಯ ಮಾಡಲಿಕ್ಕೆ ಬಂದಿರಲಿಲ್ಲ. ರಾಜನಹಳ್ಳಿ ಜಾತ್ರೆಗೆ ಕರೆಯಲಿಕ್ಕೆ ಬಂದಿದ್ದರು. ಆ ವೇಳೆ ನಾವು, ಸಚಿವರು ಸೇರಿದ್ದೆವು. ಅದನ್ನು ಪ್ರಶ್ನೆ ಮಾಡಿದರೆ ಹೇಗೆ? ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.

ಕುಂಭಮೇಳಕ್ಕೆ ಹೋಗಿರುವವರ ಬಗ್ಗೆ ಚರ್ಚೆಯಾಗಲಿ, ನಾನು ಹೋಗುತ್ತೇನೋ, ಇಲ್ಲವೋ ಅದು ಅನಗತ್ಯ. ಇಷ್ಟ ಇದ್ದವರು ಅಲ್ಲಿಗೆ ಭೇಟಿ ನೀಡುತ್ತಾರೆ. ಈಗಾಗಲೇ ಅಲ್ಲಿ ನಡೆದಿರುವ ದುರಂತದಲ್ಲಿ ಮೃತರಾಗಿರುವವರಿಗೆ ಪರಿಹಾರ ನೀಡುವ ಬಗ್ಗೆ ಜಿಲ್ಲಾಡಳಿತ ತನ್ನ ಅಧಿಕಾರದ ವ್ಯಾಪ್ತಿಯಲ್ಲಿ ಘೋಷಣೆ ಮಾಡಿದೆ. ಯಾವ ರೀತಿ ಪರಿಹಾರವನ್ನು ಕಲ್ಪಿಸಬೇಕೆಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೆ ಹೆಚ್ಚು ಸಹಾಯವಾಗಬಹುದು ಎಂಬ ನಿರೀಕ್ಷೆಗಳಿತ್ತು. ಆದರೆ, ಹಿಂದಿನ 10 ವರ್ಷಗಳ ಬಜೆಟ್ ಅನ್ನು ನೋಡಿದ್ದೇವೆ. ಯಾವುದೇ ಲಾಭವಾಗಿಲ್ಲ. ದೇಶದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆಯಾಗಬೇಕು. ಅದರ ಗಾತ್ರ ದೊಡ್ಡದಿದ್ದರೆ ಸಾಲದು, ಜನರಿಗೂ ಲಾಭವಾಗಬೇಕು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News