ಮೇ 29ರಿಂದ ಶಾಲೆಗಳ ಪ್ರಾರಂಭ : ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ
ಬೆಂಗಳೂರು : ‘ರಾಜ್ಯಾದ್ಯಂತ ಮೇ 29ರಿಂದ ಶಾಲೆಗಳ ಪುನರ್ ಆರಂಭವಾಗಲಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸರಕಾರಿ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶಾಲೆ ಪ್ರಾರಂಭದ ದಿನವೇ ಎಲ್ಲ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಗುತ್ತದೆ. ಶೂ, ಸಾಕ್ಸ್ ಅನ್ನು ಹಂತ-ಹಂತವಾಗಿ ಶಾಲೆಯಲ್ಲಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂದು ಸೂಚಿಸಿದ್ದು, ಈ ಬಗ್ಗೆ ವಿಧಾನ ಪರಿಷತ್‍ನಲ್ಲಿಯೂ ಚರ್ಚೆಯಾಗಿದೆ. ಈ ವರ್ಷ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪಿಯುಸಿ ಹಂತದಲ್ಲಿ ಮಕ್ಕಳಿಗೆ ಮಾನವೀಯ ಮೌಲ್ಯವುಳ್ಳ ಶಿಕ್ಷಣ ನೀಡುವ ಉದ್ದೇಶದಿಂದ ನೀತಿ ವಿಜ್ಞಾನ ಬೋಧಿಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ರಾಜ್ಯದಲ್ಲಿ 46 ಸಾವಿರ ಶಾಲೆಗಳಿದ್ದು, ಕೆಲ ಶಾಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಬಂದಿವೆ. ಅಂತಹ ಶಾಲೆಗಳ ಸುಧಾರಣೆಗೆ ಕ್ರಮ ವಹಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ಸ್ವಂತ ಶಕ್ತಿಯ ಮೇಲೆ ಪರೀಕ್ಷೆ ಬರೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಪಿ ಹೊಡೆಯುವುದು ಕಡಿಮೆ ಆಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.