×
Ad

ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಡಿ.ಕೆ. ಶಿವಕುಮಾರ್

Update: 2025-11-22 18:48 IST

Photo credit: X/@DKShivakumar

ಬೆಂಗಳೂರು: ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವುದು ಮಾತ್ರವಲ್ಲದೆ, ಮೀನುಗಾರಿಕೆಗೆ ಉತ್ತೇಜ ನೀಡಲು ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶನಿವಾರ ನಗರದ ಹೆಬ್ಬಾಳ ರಸ್ತೆಯಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಮೀನುಗಾರಿಕೆ ದಿನಾಚರಣೆ-2025 ಹಾಗೂ ಮತ್ಸ್ಯ ಮೇಳ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೀವು ಗಂಗಾ ಪುತ್ರರು. ಇಂತಹ ಯೋಗ ಎಲ್ಲರಿಗೂ ಬರುವುದಿಲ್ಲ. ಗಂಗಾ ಪುತ್ರ ಭೀಷ್ಮನ ಪ್ರತಿಜ್ಞೆ ಎಂದರೆ ಅದಕ್ಕೆ ಆದ ಘನತೆ ಇದೆ. ನೀವು ನೀರಿನಲ್ಲಿ ಕೆಲಸ ಮಾಡಿ ಸಮಾಜಕ್ಕೆ ಸೇವೆ ಮಾಡುತ್ತಿದ್ದೀರಿ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಅವರು ನುಡಿದರು.

ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುತ್ತಿದ್ದು, ಈ ಕೆರೆಗಳಲ್ಲಿ ಮೀನುಗಾರಿಕೆ ಮಾಡಲು ಅವಕಾಶ ಕಲ್ಪಿಸಿಕೊಡಲಿದೆ. ಮೀನುಗಾರರಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು. ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ 10 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ ಎಂದು ಅವರು ಉಲ್ಲೇಖಿಸಿದರು.

10 ಸಾವಿರ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆಯಲ್ಲಿ ವಿದ್ಯುತ್ ಇಲಾಖೆಗೆ 3 ಸಾವಿರ ಕೋಟಿಯಷ್ಟು ಮೊತ್ತ ಪಾವತಿಸಬೇಕಾಗಿದೆ. ಈ ಕೆರೆಗಳ ಪೈಕಿ ಸಣ್ಣ ಕೆರೆಗಳನ್ನು ಸೊಸೈಟಿಗಳಿಗೆ ಜವಾಬ್ದಾರಿ ನೀಡುತ್ತೇವೆ. ಉಳಿದ ಕೆರೆಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮೀನುಗಾರಿಕೆ ಮಾಡಲು ಅವಕಾಶ ನೀಡಲಾಗುವುದು. ಇದನ್ನು ಬಳಸಿಕೊಂಡು ನೀವು ಮೀನುಗಾರಿಕೆ ವೃತ್ತಿ ಮಾಡಬೇಕು ಎಂದು ಅವರು ತಿಳಿಸಿದರು.

ಮೀನು ಎಂದರೆ ಲಕ್ಷ್ಮೀ, ರೈತರು ಭೂಮಿಯಲ್ಲಿ ಕೃಷಿ ಮಾಡಿದರೆ, ಮೀನುಗಾರರು ನೀರಿನಲ್ಲಿ ಕೃಷಿ ಮಾಡುತ್ತೀರಿ. ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತೀರಿ. ನಿಮಗೆ ಸೂರ್ಯ, ಚಂದ್ರ ಎರಡೇ ಕಾಣುವುದು. ಉಳಿದಂತೆ ನಿಮ್ಮ ಆತ್ಮಬಲದಿಂದ ಇದನ್ನು ಮಾಡಿಕೊಂಡು ಬರುತ್ತಿದ್ದೀರಿ. ಮೀನು ಹಿಡಿಯುವುದು ಬೇರೆ, ಮಾರಾಟ ಮಾಡುವುದು ಬೇರೆ ಎಂದು ಅವರು ಹೇಳಿದರು.

ಒಂದೇ ವೇದಿಕೆಯಲ್ಲಿ ಸಿಎಂ-ಡಿಸಿಎಂ:

ರಾಜ್ಯದ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಚರ್ಚೆ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಮೀನುಗಾರಿಕೆ ದಿನಾಚರಣೆ-2025 ಹಾಗೂ ಮತ್ಸ್ಯ ಮೇಳ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಈ ವೇಳೆ ಮಾರ್ಮಿಕವಾಗಿ ಮಾತನಾಡಿದ ಶಿವಕುಮಾರ್, ನಾನು ಮುಖ್ಯಮಂತ್ರಿಗಳಿಗೆ ಮಶೀರ್ ಮೀನು ತೋರಿಸಿದೆ. ನಾನು ಸಣ್ಣವನಿದ್ದಾಗ ಸಂಗಮಕ್ಕೆ ಹೋಗಿ ಮೀನು ಹಿಡಿಯುತ್ತಿದ್ದೆ. ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ. ಅದಕ್ಕೆ ಬಹಳ ತಾಳ್ಮೆ ಬೇಕು. ಈ ಮೀನು ವ್ಯವಹಾರ ಜಾತಿ ಮೇಲೆ ಇಲ್ಲ, ನೀತಿ, ಛಲ ಹಾಗೂ ಆಸಕ್ತಿ ಮೇಲಿದೆ. ಮೀನುಗಾರನಿಗೆ ನಿತ್ಯ ಮೀನು ಸಿಗುವುದಿಲ್ಲ. ಕೆಲವೊಮ್ಮೆ ವಾರವಾದರೂ ಒಂದು ಮೀನು ಸಿಗುವುದಿಲ್ಲ. ಅಂತಹ ತಾಳ್ಮೆ ವೃತ್ತಿ ನಡೆಸುತ್ತಿರುವ ನೀವು ಶ್ರಮಜೀವಿಗಳು ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News