ವಿಧಾನ ಮಂಡಲದಲ್ಲಿ ನಾಳೆಯಿಂದ ‘ಬಜೆಟ್ ಕುರಿತು ಚರ್ಚೆ’
ಬೆಂಗಳೂರು : ಮೈಕ್ರೋ ಫೈನಾನ್ಸ್ ಕಂಪೆನಿಗಳ ಕಿರುಕುಳ ತಪ್ಪಿಸುವ ಮಹತ್ವದ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ(ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ, ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ’ವು ಸೇರಿದಂತೆ ಹಲವು ವಿಧೇಯಕಗಳ ಅಂಗೀಕಾರ ನಾಳೆ(ಮಾ.10)ನಡೆಯಲಿದ್ದು, ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದೆ.
ನಾಳೆ(ಮಾ.10) ಬೆಳಗ್ಗೆ 10:30ಕ್ಕೆ ವಿಧಾನಸಭೆ ಕಲಾಪ ಪ್ರಾರಂಭಗೊಳ್ಳಲಿದ್ದು, ಮೊದಲಿಗೆ ಪ್ರಶ್ನೋತ್ತರ ಕಲಾಪ ನಡೆಯಲಿದೆ. ಆ ಬಳಿಕ ವಿಧೇಯಕಗಳ ಅಂಗೀಕರಿಸುವ ಶಾಸನ ರಚನಾ ಕಲಾಪ ಜರುಗಲಿದೆ. ನಿಯಮ 69ರಡಿಯಲ್ಲಿ ಸಾರ್ವಜನಿಕ ಮಹತ್ವದ ಜರೂರು ವಿಷಯ ‘ಕೆಪಿಎಸ್ಸಿ ಪರೀಕ್ಷಾ ಅಕ್ರಮ’ದ ಕುರಿತು ಚರ್ಚಿಸುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2025-26ನೆ ಸಾಲಿನ ಬಜೆಟ್ ಬಗ್ಗೆ ಅಧಿವೇಶನದಲ್ಲಿಯೂ ನಾಳೆಯಿಂದಲೇ ಬಜೆಟ್ ಮೇಲಿನ ಚರ್ಚೆ ಆರಂಭಗೊಳ್ಳಲಿದ್ದು, ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಗ್ರಾಸವಾಗಲಿದೆ. ಇದೇ ವೇಳೆ ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳ ಬಗ್ಗೆಯೂ ವಿಸ್ತೃತವಾಗಿ ಪ್ರಸ್ತಾಪಿಸಲು ಸದಸ್ಯರಾದ ಸುನಿಲ್ ಕುಮಾರ್, ಯಶಪಾಲ್ ಸುವರ್ಣ, ಹರೀಶ್ ಪೂಂಜಾ ಹಾಗೂ ಅಶೋಕ್ ಕುಮಾರ್ ರೈ ಅವಕಾಶ ಕೋರಿದ್ದು, ಆ ವಿಚಾರವೂ ಚರ್ಚೆಗೆ ಬರಲಿದೆ.