ಇ-ಫ್ಲಾಟ್ ಫಾರಂಗಳು ಎಪಿಎಂಸಿ ನಿಯಂತ್ರಣಕ್ಕೆ ; ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ
ಬೆಂಗಳೂರು : ಅಮೆಝಾನ್, ಬಿಗ್ ಬ್ಯಾಸ್ಕೆಟ್, ಡಿ.ಮಾರ್ಟ್ ಸೇರಿದಂತೆ ಎಲ್ಲ ಇ–ಫ್ಲಾಟ್ ಫಾರಂ ವೇದಿಕೆಗಳು ಇನ್ನು ಮುಂದೆ ಎಪಿಎಂಸಿ ನಿಯಂತ್ರಣಕ್ಕೆ ಬರಲಿವೆ. ಸೆಸ್ ವಂಚನೆ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರಕಾರ ರೂಪಿಸಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ.
ಯಾವುದೇ ಇ-ಫ್ಲಾಟ್ ಫಾರಂಗಳು ಇನ್ನು ಮುಂದೆ ಎಪಿಎಂಸಿಗಳಿಗೆ ಸೆಸ್ ಸಂದಾಯ ಮಾಡುವುದು ಕಡ್ಡಾಯ. ಸೆಸ್ ವಂಚನೆ ಮಾಡಿದರೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ನೀಡಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಕೃಷಿ ಮಾರುಕಟ್ಟೆ ನಿರ್ದೇಶಕರು ನೀಡುವ ಯಾವುದೇ ತೀರ್ಪಿನ ಬಗ್ಗೆ ಅಸಮಧಾನ ಇದ್ದರೆ ನಿರ್ದೇಶಕರ ಆದೇಶ ಸ್ವೀಕರಿಸಿದ 30 ದಿನಗಳೊಳಗೆ ಕರ್ನಾಟಕ ಅಫೀಲು ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೋಮವಾರ ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರಕ್ಕೆ ಮನವಿ ಮಾಡಿದ ಅವರು, ಈ ತಿದ್ದುಪಡಿಯಿಂದ ಎಪಿಎಂಸಿ ಅಥವಾ ರೈತರನ್ನು ವಂಚನೆ ಮಾಡಲು ಸಾಧ್ಯವಿಲ್ಲ. ಕಂಪನಿಯೊಂದು ಸೆಸ್ ವಂಚನೆ ಮಾಡಿದ್ದರಿಂದ ದೊಡ್ಡ ಮೊತ್ತದ ದಂಡ ವಸೂಲು ಮಾಡಲಾಗಿದೆ ಎಂದು ವಿವರಿಸಿದರು.
ಯಾವುದೇ ವ್ಯಕ್ತಿ ಈ ಪ್ರಕರಣದ ಅಡಿಯಲ್ಲಿ ಲೈಸೆನ್ಸ್ ಪಡೆಯದ ಹೊರತು ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರಕ್ಕಾಗಿ ಇ–ವಾಣಿಜ್ಯ ವೇದಿಕೆ ಸ್ಥಾಪನೆ ಮಾಡುವಂತಿಲ್ಲ. ಉದ್ದೇಶಪೂರ್ವಕ ತಪ್ಪು ಮಾಹಿತಿ ಅಥವಾ ವಂಚನೆ ಮೂಲಕ ಲೈಸೆನ್ಸ್ ಪಡೆದಿದ್ದರೆ, ಲೈಸೆನ್ಸ್‍ದಾರರು ಯಾವುದೇ ನಿಬಂಧನೆ ಅಥವಾ ಷರತ್ತು ಉಲ್ಲಂಘನೆ ಮಾಡಿದರೆ ಮಾರುಕಟ್ಟೆ ನಿರ್ದೇಶಕರು ಲೈಸೆನ್ಸ್ ಅಮಾನತುಪಡಿಸುವ ಅಧಿಕಾರ ಹೊಂದಿರುತ್ತಾರೆ ಎಂದು ಅವರು ತಿಳಿಸಿದರು.
ಕೃಷಿ ಮಾರುಕಟ್ಟೆ ನಿರ್ದೇಶಕರು ನೇಮಕ ಮಾಡಬಹುದಾದ ಷರತ್ತುಗಳು ಮತ್ತು ಅಂಥ ಶುಲ್ಕಗಳು ಮತ್ತು ಭದ್ರತಾ ಠೇವಣಿಗೊಳಪಟ್ಟು ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರ ಸುಗಮಗೊಳಿಸಲು ಇ-ವಾಣಿಜ್ಯ ವೇದಿಕೆ ರಚಿಸಲು ಲೈಸೆನ್ಸ್ ಮಂಜೂರು ಮಾಡಬಹುದು. ಇ-ವಾಣಿಜ್ಯ ವೇದಿಕೆ ಸ್ಥಾಪಿಸಲು ಮತ್ತು ನಡೆಸಲು ಬಯಸುವ ಯಾವುದೇ ವ್ಯಕ್ತಿ ಕೃಷಿ ಮಾರುಕಟ್ಟೆ ನಿರ್ದೇಶಕರು ನೇಮಕ ಮಾಡಬಹುದಾದ ವಿಧಾನದಲ್ಲಿ ಶುಲ್ಕ ಮತ್ತು ಠೇವಣಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಶಿವಾನಂದ ಪಾಟೀಲ್ ಹೇಳಿದರು.
ಇ-ಫ್ಲಾಟ್ ಫಾರಂನಲ್ಲಿ ನೋಂದಾಯಿಸಲು ಈ ಅಧಿನಿಯಮದಡಿ ಪ್ರಾಧಿಕಾರವು ಲೈಸೆನ್ಸ್ ನೀಡಿದ ಲೈಸೆನ್ಸ್ ಯುಕ್ತ ವ್ಯಾಪಾರಿಗಳನ್ನು ಮಾತ್ರ ಅನುಮತಿಸತಕ್ಕದ್ದು. ವೇದಿಕೆಯಲ್ಲಿ ನಡೆಯುವ ಸಂಪೂರ್ಣ ವ್ಯಾಪಾರ ಕಾರ್ಯಾಚರಣೆ, ಸಂಬಂಧಿಸಿದ ಕಾರ್ಯಚಟುವಟಿಕೆ, ತೀರ್ಮಾನಗಳಲ್ಲಿ ಪಾರದರ್ಶಕ ಕಡ್ಡಾಯಗೊಳಿಸಲಾಗಿದೆ. ಹಾಗೂ ಎಲ್ಲ ವಹಿವಾಟು ದಾಖಲೆಗಳನ್ನು ವಿದ್ಯುನ್ಮಾನ ನಮೂನೆಯಲ್ಲಿ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಲೈಸೆನ್ಸ್ ದಾರರು ಮಾಡಬೇಕಾದ ಪಾವತಿ, ಕೃಷಿ ಉತ್ಪನ್ನಗಳ ತೂಕ, ಗುಣಮಟ್ಟ, ಬೆಲೆ, ದರಗಳು, ಶುಲ್ಕಗಳು, ಮತ್ತಿತರ ವಿಚಾರ ಕುರಿತು ಇ–ವಾಣಿಜ್ಯ ವೇದಿಕೆ ಲೈಸೆನ್ಸುದಾರ ವೇದಿಕೆಯಲ್ಲಿ ಉತ್ಪನ್ನಕೊಡು-ಕೊಳ್ಳುವ ಯಾವುದೇ ವಿವಾದ ಇತ್ಯರ್ಥಕ್ಕೆ ಮೂವತ್ತು ದಿನಗಳೊಳಗೆ ಅಗತ್ಯ ದಾಖಲೆಗಳೊಂದಿಗೆ ಕೃಷಿ ಮಾರುಕಟ್ಟೆ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.