×
Ad

ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಚಿಸುವವರಿಗೆ ಮಾಹಿತಿ ನೀಡಲು ‘ಆ.17ಕ್ಕೆ ವಿಶೇಷ ಮೇಳ’ : ಡಾ.ಶರಣಪ್ರಕಾಶ್ ಪಾಟೀಲ್

Update: 2025-08-13 19:24 IST

ಬೆಂಗಳೂರು, ಆ. 13: ವಿದೇಶ ವ್ಯಾಸಂಗ ಶ್ರೀಮಂತರಿಗೆ ಮಾತ್ರವಲ್ಲ, ಈಗ ಎಲ್ಲರಿಗೂ ಕೈಗೆಟುಕಲಿದೆ. ವಿದೇಶದಲ್ಲಿ ಅಧ್ಯಯನ ಮಾಡಬೇಕೆಂಬ ಕನಸು ಕಂಡಿರುವವರಿಗೆ ಅದು ನನಸಾಗುವ ಕಾಲ ಬಂದಿದೆ. ಇದೆಲ್ಲವೂ ಕರ್ನಾಟಕ ಸರಕಾರದ ಹೊಸ ಯೋಜನೆಯಿಂದ ಸಾಧ್ಯವಾಗುತ್ತಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ದುರ್ಬಲವಾಗಿರುವ, ಮಧ್ಯಮವರ್ಗದ ಹಿನ್ನೆಲೆಯ ವಿದ್ಯಾರ್ಥಿಗಳು ಇದೀಗ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಯಾವುದೇ ತೊಂದರೆಯಿಲ್ಲದೇ ಪಡೆಯಬಹುದಾಗಿದೆ. ಕೌಶಲ್ಯ ಅಭಿವೃದ್ಧಿ ಇಲಾಖೆ ಅಡಿಯ ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ(ಕೆವಿಟಿಎಸ್‍ಡಿಸಿ) ಆ.17ರ ರವಿವಾರ ಹೋಟೆಲ್ ಲಲಿತ್ ಅಶೋಕ್‍ನಲ್ಲಿ ಅಂತಾರಾಷ್ಟ್ರೀಯ ವಿದೇಶದಲ್ಲಿ ಅಧ್ಯಯನ ಮೇಳ-2025 ಅನ್ನು ಆಯೋಜಿಸಿದೆ ಎಂದರು.

ಈ ವಿಶೇಷ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಪ್ರಮುಖ ಜಾಗತಿಕ ವಿಶ್ವ ವಿದ್ಯಾಲಯಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಸಂಸ್ಥೆಗಳು ವಿಶ್ವದ ಟಾಪ್ 500ರಲ್ಲಿ ಸ್ಥಾನ ಪಡೆದಿವೆ. ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ಮಾಡುವ ಅವಕಾಶವನ್ನು ಒದಗಿಸಲಾಗುವುದು. ಇದೇ ಮೊದಲ ಬಾರಿಗೆ ಈ ರೀತಿಯ ಯೋಜನೆಯನ್ನು ದೇಶದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದು ‘ಜಾಗತಿಕ ಶಿಕ್ಷಣದ ಹೆಬ್ಬಾಗಿಲು’. ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಲು ಭಾರತದಿಂದ ತೆರಳಿದ ನಂತರ ಅವರಿಗೆ ಎಲ್ಲ ರೀತಿಯ ಬೆಂಬಲ ಒದಗಿಸುವುದು ನಮ್ಮ ಗುರಿಯಾಗಿದೆ. ಈ ಸರಕಾರಿ ಬೆಂಬಲಿತ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹೆಚ್ಚು ಆಪ್ತವಾಗಿರಲಿದೆ. ಶೈಕ್ಷಣಿಕ ಪ್ರಗತಿ ಮತ್ತು ಕಾನೂನು ನೆರವು ಎಲ್ಲವೂ ದೊರೆಯಲಿದೆ ಎಂದು ಅವರು ವಿವರಿಸಿದರು.

ಈ ಎಕ್ಸ್‌ ಪೋದಲ್ಲಿ ಹೆಚ್ಚು ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ನೀಡುತ್ತದೆ. ವಿಶ್ವವಿದ್ಯಾಲಯದ ಆಯ್ಕೆ, ಏಜೆನ್ಸಿ ಶುಲ್ಕವಿಲ್ಲದೆ ಉಚಿತ ಮಾರ್ಗದರ್ಶನವನ್ನು ನಾವು ನೀಡುತ್ತೇವೆ ಎಂದು ಡಾ.ಶರಣಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.

ಪ್ರಮುಖ ಅಂಶಗಳು: ವಿವಿ ಪ್ರತಿನಿಧಿಗಳೊಂದಿಗೆ ಒನ್-ಆನ್-ಒನ್ ಸೆಷನ್, ಸ್ಪಾಟ್ ವಿದ್ಯಾರ್ಥಿ ವೇತನಗಳು ಮತ್ತು ಅರ್ಹತಾ ಮೌಲ್ಯಮಾಪನಗಳು, ವೀಸಾ ಪ್ರಕ್ರಿಯೆ, ಹಣಕಾಸು ಯೋಜನೆ, ಆರೋಗ್ಯ ವಿಮೆ, ಭಾಷಾ ಪ್ರಾವೀಣ್ಯತೆ ಮತ್ತು ಇತರೆ ಮಾರ್ಗದರ್ಶನ. ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‍ಡಮ್, ಅಮೆರಿಕ, ನ್ಯೂಜಿಲೆಂಡ್ ಮತ್ತು ಮಧ್ಯಪ್ರಾಚ್ಯ ಸಹಿತ ವಿವಿಧ ವಿವಿಗಳ ಪ್ರತಿನಿಧಿಗಳು ಇರಲಿದ್ದಾರೆ. ಎಕ್ಸ್‌ ಪೋದಲ್ಲಿ ಪಾಲ್ಗೊಳ್ಳಲು http://studyabroad.ksdckarnataka.com ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News