ಮುಂಗಾರು ಅಧಿವೇಶನ | ಮೈಶುಗರ್ಸ್ ಅನುದಾನ ದುರ್ಬಳಕೆ ಬಗ್ಗೆ ತನಿಖೆ : ಸಚಿವ ಶಿವಾನಂದ ಪಾಟೀಲ್
ಬೆಂಗಳೂರು : ʼಈ ಹಿಂದೆ ಮೈಶುಗರ್ಸ್ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 100 ಕೋಟಿ ರೂ. ಗೂ ಅಧಿಕ ಹಣ ದುರ್ಬಳಕೆಯಾಗಿದ್ದು, ತನಿಖೆ ಮಾಡಿಸಲಾಗುವುದುʼ ಎಂದು ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಮಂಗಳವಾರ ಮಧು ಜಿ. ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಮೈಶುಗರ್ಸ್ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು, ಪ್ರತಿಶತ 3.5ರಷ್ಟಿದ್ದ ಸಕ್ಕರೆ ಇಳುವರಿ ಪ್ರಮಾಣ ಈಗ ಪ್ರತಿಶತ 8ರಷ್ಟಿದೆ. ಸಹ ವಿದ್ಯುತ್ ಘಟಕವನ್ನೂ ನಮ್ಮ ಸರಕಾರ ಬಂದ ನಂತರವೇ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.
12.21ಲಕ್ಷ ವಿದ್ಯುತ್ ಉತ್ಪಾದನೆ ಮಾಡಲಾಗಿದ್ದು, 7.28 ಲಕ್ಷ ಯೂನಿಟ್ ಗಳನ್ನು ಕಾರ್ಖಾನೆಗೆ ಬಳಕೆ ಮಾಡಲಾಗಿದೆ. 4.93 ಲಕ್ಷ ಯೂನಿಟ್‌ಗಳನ್ನು ಚೆಸ್ಕಾಂಗೆ ಪೂರೈಕೆ ಮಾಡಲಾಗಿದೆ. ಪ್ರತಿ ಯೂನಿಟ್‌ಗೆ ರೂ 5.91ಗಳಂತೆ ರೂ 29.14 ಲಕ್ಷ ಆದಾಯ ಬಂದಿದೆ. ಉತ್ಪಾದಿಸಿದ ಎಲ್ಲ ವಿದ್ಯುತ್ತನ್ನು ಚೆಸ್ಕಾಂಗೆ ಪೂರೈಕೆ ಮಾಡಿದರೆ 9.48 ಕೋಟಿ ರೂ ಆದಾಯ ಬರಲಿದೆ ಎಂದರು.
ಬೆಂಗಳೂರಿನಲ್ಲಿರುವ ಮೈಶುಗರ್ ಕಂಪನಿಯ ಆಡಳಿತ ಕಚೇರಿಯ ಆಸ್ತಿ ತೆರಿಗೆ 6.50 ಕೋಟಿ ರೂ. ಗಳಷ್ಟಿದ್ದು, ಏಕ ತೀರುವಳಿ ಅಡಿಯಲ್ಲಿ 2.04 ಕೋಟಿ ರೂ ಪಾವತಿಸಿ 4.50 ಕೋಟಿ ರೂ.ಗಳನ್ನು ಕಂಪನಿಗೆ ಉಳಿತಾಯ ಮಾಡಲಾಗಿದೆ. ಮೈಶುಗರ್ಸ್ ಕಂಪನಿ ಒಡೆತನದಲ್ಲಿ 235.10 ಎಕರೆ ಇದ್ದು, ಎಷ್ಟು ಒತ್ತುವರಿಯಾಗಿದೆ ಎಂಬ ಬಗ್ಗೆ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಹೇಳಿದರು.
ಶಿವಾನಂದ ಪಾಟೀಲ್ ಅವರು ಸಕ್ಕರೆ ಸಚಿವರಾದ ನಂತರ ಮೈಶುಗರ್ಸ್ ಪುನರಾರಂಭ ಮಾಡಿದ್ದು, ಕಾರ್ಖಾನೆ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.