ʼಎಂಇಎಸ್ʼ ಪುಂಡಾಟಿಕೆ ಮುಂದುವರಿಸಿದರೆ ಗೂಂಡಾ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ : ಸಚಿವ ತಂಗಡಗಿ ಎಚ್ಚರಿಕೆ
ಶಿವರಾಜ್ ತಂಗಡಗಿ
ಬೆಂಗಳೂರು : ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನವರು ಕನ್ನಡದ ತಂಟೆಗೆ ಬಂದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಪುಂಡಾಟಿಕೆ ಹೀಗೆ ಮುಂದುವರೆದರೆ ಗೂಂಡಾ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ನೀರು, ಅನ್ನವನ್ನು ಉಂಡು ಮತ್ತೊಂದು ಭಾಷೆಯ ಬಗ್ಗೆ ವ್ಯಾಮೋಹ ತೋರಿಸಿದರೆ ಮುಂದೆ ಪರಿಣಾಮ ನೆಟ್ಟಗಿರಲ್ಲ. ಎಂಇಎಸ್ ಪುಂಡಾಟಿಕೆ ಬಗ್ಗೆ ಸಿಎಂ ಹಾಗೂ ಗೃಹ ಸಚಿವರ ಬಗ್ಗೆ ಚರ್ಚೆ ಮಾಡುತ್ತೇವೆ. ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ದೇವೆ. ಕನ್ನಡದ ವಿಚಾರಕ್ಕೆ ಬಂದರೆ ಸರಿಯಾದ ಶಿಸ್ತು ಕಲಿಸುವ ಸ್ಥಿತಿ ನಿರ್ಮಾಣ ಆಗುತ್ತೆ ಎಂದು ಹೇಳಿದರು.
ನಾವು ಕನ್ನಡಿಗರು ಬೇರೆ ಭಾಷೆಯನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಆದರೆ ಈ ರಾಜ್ಯದಲ್ಲಿ ವಾಸವಿರುವ ಅನ್ಯಭಾಷಿಕರು ಈ ನೆಲದ ಭಾಷೆ ಮತ್ತು ಕಾನೂನನ್ನು ಗೌರವಿಸಿ, ಪಾಲಿಸಬೇಕು. ಕನ್ನಡಿಗರು ಪುಂಡಾಟ ನಡೆಸಲ್ಲ. ಕನ್ನಡಿಗರು ಆ ರೀತಿ ಮಾತನಾಡಲು ನಿಂತರೆ, ನೀವು ಯಾರು ಉಳಿಯುವುದಿಲ್ಲ ಎಂದು ಹೇಳಿದರು.
‘ಎಲ್ಲ ಮರಾಠಿಗರು ಪುಂಡಾಟ ಮಾಡುವುದಿಲ್ಲ. ಕೆಲವೇ ಕೆಲವು ಕಿಡಿಗೇಡಿಗಳು ಈ ರೀತಿ ಪುಂಡಾಟ ಮಾಡುತ್ತಿದ್ದಾರೆ. ಅದಕ್ಕೆ ಸರಿಯಾಗಿ ಉತ್ತರ ಕೊಡುವ ಸ್ಥಿತಿ ಬಂದಿದೆ, ಕೊಟ್ಟೆ ಕೊಡುತ್ತೇವೆ. ಕನ್ನಡ ಭಾಷೆ, ನೆಲ ಮತ್ತು ಜಲದ ವಿಚಾರದ ಬಗ್ಗೆ ಪ್ರತಿಯೊಬ್ಬರು ಧ್ವನಿ ಎತ್ತಬೇಕು. ಬೆಳಗಾವಿ ನಾಯಕರು ಈ ಬಗ್ಗೆ ಮಾತನಾಡಬೇಕು. ನಾವು ಇಲ್ಲಿ ಹೇಳೋದಲ್ಲ, ಮರಾಠರ ಜಾಗದಲ್ಲೇ ನಿಂತು ಉತ್ತರ ಕೊಡುತ್ತೀವಿ. ನಮಗೆ ಯಾವುದೇ ಅಂಜಿಕೆ ಇಲ್ಲ. ಕನ್ನಡದ ವಿಚಾರಕ್ಕೆ ಬಂದರೆ ನಾವು ಸುಮ್ಮನಿರುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.