"ಪಕ್ಷದ ಶಿಸ್ತು ಉಲ್ಲಂಘನೆ": ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಗೆ ಶೋಕಾಸ್ ನೋಟಿಸ್
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತು ಹೇಳಿಕೆ ನೀಡಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್‍ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರಣ ಕೇಳಿ ನೋಟಿಸ್ ನೀಡಿದ್ದು, ಒಂದು ವಾರದ ಒಳಗಾಗಿ ತಮ್ಮ ಹೇಳಿಕೆಗಳ ಬಗ್ಗೆ ಸಮಜಾಯಿಷಿ ನೀಡುವಂತೆ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟು ಮಾಡುವಂತಹ ಹೇಳಿಕೆಗಳನ್ನು ಮಂಗಳವಾರ ಮಾಧ್ಯಮಗಳಿಗೆ ನೀಡಿದ್ದೀರಿ. ತಮ್ಮ ಈ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆ ಆಗಿರುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಸಕ ಇಕ್ಬಾಲ್ ಹುಸೇನ್, ಡಿಕೆಶಿ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಾನು ಸೇರಿದಂತೆ ಹಲವರ ಅಭಿಲಾಷೆಯಾಗಿದೆ. ಹೈಕಮಾಂಡ್ ಅವರಿಗೂ ಒಂದು ಅವಕಾಶ ನೀಡಬೇಕು. ಸುಮಾರು 100 ಶಾಸಕರು ಸಿಎಂ ಬದಲಾವಣೆ ಪರವಾಗಿದ್ದಾರೆ ಎಂದು ಹೇಳಿದ್ದರು.