×
Ad

‘ಮಳೆಹಾನಿ’ ಪರಿಹಾರ ಕಾರ್ಯಗಳಿಗೆ ಅನುದಾನದ ಕೊರತೆಯಿಲ್ಲ: ಸಿಎಂ ಸಿದ್ದರಾಮಯ್ಯ

Update: 2025-09-08 18:50 IST

ಬೆಂಗಳೂರು, ಸೆ.8 : ಅತಿವೃಷ್ಟಿಯಿಂದ ಉಂಟಾಗಿರುವ ಮೂಲಸೌಕರ್ಯಗಳ ಹಾನಿ ದುರಸ್ತಿಗೆ ಎಸ್‍ಡಿಆರ್‌ಎಫ್ ಅಡಿ ಅನುದಾನ ಬಿಡುಗಡೆ ಮಾಡಲು ಅವಕಾಶವಿದ್ದು, ಮಳೆಹಾನಿ ಪರಿಹಾರ ಕಾರ್ಯಗಳಿಗೆ ಯಾವುದೇ ಅನುದಾನದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ‘ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಉಂಟಾದ ಹಾನಿ ಹಾಗೂ ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಓಗಳು ಸೇರಿದಂತೆ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದ’ದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಾಗೂ ತಹಶೀಲ್ದಾರ್ ವಿಪತ್ತು ನಿಧಿ ಅಡಿ 1385.21 ಕೋಟಿ ರೂ. ಅನುದಾನ ಲಭ್ಯವಿದೆ ಎಂದರು.

ರೈತರ ಜಮೀನುಗಳಿಗೆ ಉಂಟಾಗಿರುವ ಹಾನಿಗೂ ಪರಿಹಾರ ಒದಗಿಸಲು ಅನುದಾನ ಲಭ್ಯವಿದ್ದು, ಹೆಚ್ಚುವರಿ ಪರಿಹಾರ ಒದಗಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ಹಿಂಗಾರು ಬಿತ್ತನೆಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಈಗಲೇ ತಯಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಹಾನಿ ಬಗ್ಗೆ ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದ್ದು, 4,80,256 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. 40,407 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು, ಒಟ್ಟು 5,20,663 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

651 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 9,087 ಮನೆಗಳು ಭಾಗಶಃ ಹಾನಿಯಾಗಿವೆ. ಸಂಪೂರ್ಣ ಹಾನಿಯಾದ 649 ಮನೆಗಳಿಗೆ ಹಾಗೂ ಭಾಗಶಃ ಹಾನಿಯಾದ 8,608 ಮನೆಗಳಿಗೆ ಪರಿಹಾರ ಪಾವತಿಸಲಾಗಿದೆ. ಮನೆ ಹಾನಿಯಾದವರಿಗೆ ಪರಿಹಾರ ಹಾಗೂ ವಿವಿಧ ವಸತಿ ಯೋಜನೆಗಳಡಿ ಮನೆಯನ್ನೂ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಹೇಳಿದರು.

ಮಳೆಯಿಂದಾಗಿ 683 ಕಿ.ಮೀ. ರಾಜ್ಯ ಹೆದ್ದಾರಿ, 1,383 ಜಿಲ್ಲಾ ಪ್ರಮುಖ ಹೆದ್ದಾರಿ, 5,558 ಗ್ರಾಮೀಣ ರಸ್ತೆಗಳು, 656 ಸೇತುವೆ/ಕಲ್ವರ್ಟ್‍ಗಳು, 1,877 ಶಾಲಾ ಕಟ್ಟಡಗಳು, 160 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1,018 ಅಂಗನವಾಡಿಗಳು, 25,279 ವಿದ್ಯುತ್ ಕಂಬಗಳು, 819 ಟ್ರಾನ್ಸ್‍ಫಾರ್ಮರ್‍ಗಳು, 31 ಸಣ್ಣ ನೀರಾವರಿ ಕೆರೆಗಳಿಗೆ ಹಾನಿ ಸಂಭವಿಸಿದೆ ಎಂದು ಅವರು ವಿವರಿಸಿದರು.

ತುಂಗಾಭದ್ರಾ ಅಣೆಕಟ್ಟಿನಲ್ಲಿ ಪ್ರಥಮ ಬೆಳೆಗೆ ಮಾತ್ರ ನೀರು ಲಭ್ಯವಿದ್ದು, ಎರಡನೆ ಬೆಳೆಗೆ ನೀರು ಹರಿಸಲು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ನೀರು ಹರಿಸುವ ಪೂರ್ವದಲ್ಲೇ ಎಲ್ಲ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈಗ ಸ್ವಲ್ಪ ಕಡಿಮೆಯಿದೆ. ಪ್ರಮುಖ ಜಲಾಶಯಗಳ ಗರಿಷ್ಟ ಸಾಮಥ್ರ್ಯ 895.62 ಟಿಎಂಸಿ ಇದ್ದು, ಪ್ರಸ್ತುತ 840.52 ಟಿಎಂಸಿ ಸಂಗ್ರಹವಿದೆ. ಹಿಂದಿನ ವರ್ಷ ಈ ಅವಧಿಯಲ್ಲಿ 856.17 ಟಿಎಂಸಿ ಸಂಗ್ರಹ ಇತ್ತು ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಜೂ.1ರಿಂದ ಸೆಪ್ಟೆಂಬರ್ ಮೊದಲ ವಾರದ ವರೆಗೆ ವಾಡಿಕೆಗಿಂತ ಶೇ.4ರಷ್ಟು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ 721 ಮಿ.ಮೀ ಇದ್ದು, 753 ಮಿ.ಮೀ ಮಳೆ ದಾಖಲಾಗಿದೆ. ಹಿಂದಿನ ವರ್ಷ ಶೇ.23ರಷ್ಟು ಹೆಚ್ಚುವರಿ ಮಳೆ ದಾಖಲಾಗಿತ್ತು. ಚಾಮರಾಜ ನಗರದಲ್ಲಿ ಶೇ.24ರಷ್ಟು ಕಡಿಮೆ ಮಳೆಯಾಗಿದೆ. ವಿಜಯಪುರ, ಗದಗ, ಬಾಗಲಕೋಟೆ, ದಾವಣಗೆರೆ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ. ರಾಜ್ಯದಲ್ಲಿ ಶೇ.98ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಬಿತ್ತನೆ ಗುರಿ 82.50 ಲಕ್ಷ ಹೆಕ್ಟೇರ್ ಇದ್ದು, 80.76 ಲಕ್ಷ ಹೆಕ್ಟೇರ್ ವಾಸ್ತವಿಕ ಬಿತ್ತನೆಯಾಗಿದೆ ಎಂದು ಅವರು ವಿವರಿಸಿದರು.

‘ಮಳೆಯಿಂದಾಗಿ ಎಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 111 ಮಂದಿ ಸಾವನ್ನಪ್ಪಿದ್ದು, ಎಲ್ಲ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ. ಒಟ್ಟು 5.55 ಕೋಟಿ ರೂ.ಪರಿಹಾರ ನೀಡಲಾಗಿದೆ. ಈ ಅವಧಿಯಲ್ಲಿ ಒಟ್ಟು 766 ಜಾನುವಾರುಗಳು ಸಾವಿಗೀಡಾಗಿದ್ದು, ಒಟ್ಟು 1.52 ಕೋಟಿ ರೂ. ಪರಿಹಾರ ವಿತರಿಸಲಾಗಿದೆ’

-ಸಿದ್ದರಾಮಯ್ಯ, ಮುಖ್ಯಮಂತ್ರಿ

‘ತುಂಗಾಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ಬದಲಾವಣೆ, ನಿರ್ವಹಣೆ ಸೇರಿದಂತೆ ಅಣೆಕಟ್ಟಿನ ಮೂಲ ಸೌಕರ್ಯಗಳ ಅಭಿವೃದ್ಧಿಯು ಕೇಂದ್ರ ಸರಕಾರದ ಅಧೀನದಲ್ಲಿರುವ ತುಂಗಾಭದ್ರಾ ಮಂಡಳಿಯ ವ್ಯಾಪ್ತಿ ಬರಲಿದ್ದು, 32 ಕ್ರೆಸ್ಟ್ ಗೇಟ್ ಬದಲಾವಣೆಗೆ ಈಗಾಗಲೇ ಟೆಂಡರ್ ಆಗಿದೆ. 8 ಕ್ರೆಸ್ಟ್‍ಗೇಟ್‍ಗಳು ಅಳವಡಿಕೆಗೆ ಸಿದ್ಧವಿದೆ’

-ಸಿದ್ದರಾಮಯ್ಯ, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News