ಮದ್ದೂರು ಪ್ರಕರಣ | ಪೊಲೀಸರ ಮಾತು ಕೇಳದೆ ಇರುವುದರಿಂದ ಲಘು ಲಾಠಿ ಪ್ರಹಾರ : ಸಿದ್ದರಾಮಯ್ಯ
"ಬಿಜೆಪಿಯವರು ಪ್ರಚೋದನೆ ಮಾಡುವುದರಲ್ಲಿ ನಿಸ್ಸೀಮರು"
ಬೆಂಗಳೂರು, ಸೆ.9: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಿನ್ನೆ ನಡೆದ ಗಲಭೆ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡುವ ನೆಪದಲ್ಲಿ ಪೊಲೀಸರ ಸೂಚನೆಗಳನ್ನು ಮೀರಿ ಗುಂಪುಗೂಡಿ ಗಲಾಟೆ ಮಾಡಿದ ಕಾರಣಕ್ಕೆ ಲಘು ಲಾಠಿ ಪ್ರಹಾರ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮದ್ದೂರಿನಲ್ಲಿ ನಿನ್ನೆ ರಾತ್ರಿ ಮಸೀದಿಯ ಮುಂದೆ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಹೋದಾಗ ಗಲಾಟೆ ಆಗಿದೆ. ಈ ವೇಳೆ ಗಲಭೆಯನ್ನು ತಡೆಯಲು ಲಘು ಲಾಠಿ ಪ್ರಹಾರ ಮಾಡಲಾಗಿದೆ. ಕಲ್ಲು ತೂರಾಟ ಸಂಬಂಧ 21 ಮಂದಿಯನ್ನು ಈಗಾಗಲೇ ಬಂಧನ ಮಾಡಲಾಗಿದೆ ಎಂದು ಹೇಳಿದರು.
ಮದ್ದೂರು ಗಲಭೆ ಹಿನ್ನೆಲೆಯಲ್ಲಿ ಯಾರೇ ತಪ್ಪು ಮಾಡಿದರೂ, ಅವರ ವಿರುದ್ಧ ಕಾನೂನು ರೀತಿಯಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಆದರೆ, ಗಲಭೆ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ರಾಜಕೀಯ ಮಾಡುತ್ತಿದ್ದು, ಪ್ರಚೋದನೆ ಮಾಡುವುದರಲ್ಲಿ ಅವರು (ಬಿಜೆಪಿಯವರು) ನಿಸ್ಸೀಮರಾಗಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಮದ್ದೂರು ಗಲಾಟೆ, ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ. ಈ ಘಟನೆಗೆ ರಾಜಕೀಯ ಥಳುಕು ಹಾಕಿಕೊಳ್ಳುವ ಸಾಧ್ಯತೆ ಇದ್ದು, ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ನೀಡಬೇಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕೋರ್ಟ್ ತೀರ್ಮಾನ ಮಾಡಲಿ : ಲೇಖಕಿ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಸಂಬಂಧ ಮಾಜಿ ಸಂಸದ ಪ್ರತಾಪ್ ಸಿಂಹ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ ತೀರ್ಮಾನ ಮಾಡಲಿ. ಈ ಹಿಂದೆ ನಿಸಾರ್ ಅಹಮದ್, ಮಿರ್ಜಾ ಇಸ್ಮಾಯಿಲ್ ದಸರಾ ಮಾಡುವಾಗ ಕೋರ್ಟ್‍ಗೆ ಹೋಗಿಲ್ಲ. ಪ್ರತಾಪ್ ಸಿಂಹನನ್ನು, ಬಿಜೆಪಿ ಪಕ್ಷದಿಂದ ನಿರ್ಲಕ್ಷ್ಯ ಮಾಡಲಾಗಿದ್ದು, ಜನರ ಗಮನ ಸೆಳೆಯಲು ಅವರು ಈ ರೀತಿ ಮಾಡಿರಬೇಕು ಎಂದು ಸಿದ್ದರಾಮಯ್ಯ ಟೀಕಿಸಿದರು.