ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಲಿ : ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹ
ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಅಹಿಂದ ಸಮುದಾಯಗಳು ಶ್ರಮಪಟ್ಟಿದ್ದು, ಈ ಸಮುದಾಯಗಳಿಗೆ ನ್ಯಾಯವನ್ನು ಒದಗಿಸುತ್ತಿರುವ ಸಿದ್ದರಾಮಯ್ಯ ಅವರೇ ಮುಂದಿನ ಚುನಾವಣೆವರಗೂ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹಿಸಿದೆ.
ಗುರುವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ವರಿಷ್ಠರು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದಿಲ್ಲ ಎಂಬ ನಂಬಿಕೆ ಇದೆ. ಒಂದು ವೇಳೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ, ಕಾಂಗ್ರೆಸ್ ಪಕ್ಷವು ಮುಂದಿನ ಚುನಾವಣೆಗಳಲ್ಲಿ ಅಹಿಂದ ಸಮುದಾಯಗಳ ಸಾಮರ್ಥ್ಯ ವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ರಾಜಕೀಯ ವಲಯದಲ್ಲಿ ಸಂಘಗಳು, ಮಠಗಳು ಹಸ್ತಕ್ಷೇಪ ಮಾಡುತ್ತಿವೆ. ತಳ ಸಮುದಾಯದ ಮುಖ್ಯಮಂತ್ರಿಯ ಅಧಿಕಾರವನ್ನು ಎರಡೂವರೆ ವರ್ಷಕ್ಕೆ ಇಳಿಸಿರುವುದು ಸರಿಯಲ್ಲ. ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್ ಆಗಲಿ, ಸಿದ್ದರಾಮಯ್ಯ ಆಗಲಿ, ಡಿ.ಕೆ. ಶಿವಕುಮಾರ್ ಆಗಲಿ ಮಾತನಾಡುತ್ತಿಲ್ಲ. ಆದರೆ ಒಕ್ಕಲಿಗರ ಸಂಘವು ಡಿ.ಕೆ. ಶಿವಕುಮಾರ್ ಅವರ ಕೂಲಿಯನ್ನು ಕೇಳುತ್ತಿದೆ. ಅವರಿಗೆ ಸಿಗಬೇಕಾದ ಪ್ರತಿಫಲ ಈಗಾಗಲೇ ದೊರೆತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಒಕ್ಕಲಿಗರ ಸಂಘವು ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರವನ್ನು ನೀಡಬೇಕು, ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಬೆದರಿಕೆ ಹಾಕುತ್ತಿದೆ. ಆದರೆ ಬಹುಸಂಖ್ಯಾತ ಸಮುದಾಯಗಳು ಅವರ ಬೆದರಿಕೆಗೆ ಭಯಪಡುವುದಿಲ್ಲ. ಹಿಂದುಳಿದ ಜಾತಿಗಳಿಗೂ ಸಂಘಗಳು, ಮಠಗಳಿವೆ ಎಂದು ಅವರು ತಿಳಿದುಕೊಳ್ಳಬೇಕು ಎಂದು ಕೆ.ಎಂ. ರಾಮಚಂದ್ರಪ್ಪ ಹೇಳಿದರು.
ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಅಹಿಂದ ಸಮುದಾಯಗಳಿಗೆ ನೋವುಂಟಾಗಿದೆ. ಶೇ.70ರಷ್ಟು ಅಹಿಂದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿವೆ. ಆದರೆ ‘ನನ್ನಂದಲೇ ಪಕ್ಷ ಆಧಿಕಾರಕ್ಕೆ ಬಂದಿದೆ’ ಎಂದು ಹೇಳುವುದು ಸರಿಯಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಒಕ್ಕಲಿಗರ ಪಾಲು ಇದೆ. ಆದರೆ ಒಕ್ಕಲಿಗ ಸಮುದಾಯದ ಶೇ.20ರಷ್ಟು ಮತಗಳು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಬಂದಿವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಖ್ಯಮಂತ್ರಿ ಬದಲಾಯಿಸುವ ಅಧಿಕಾರ ಇದೆ. ಆದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆಯಾಗಿಲ್ಲ. ಒಂದು ವೇಳೆ ಚರ್ಚೆಯಾಗಿದ್ದರೆ, ಅಂದೇ ಏಕೆ ಬಹಿರಂಗಪಡಿಸಲಿಲ್ಲ? ಈಗ ಏಕಾಏಕಿ ಅಧಿಕಾರ ಬೇಕು ಎಂದು ಕೇಳಿದರೆ ಹೇಗೆ ಎಂದು ಅವರು ಪ್ರಶ್ನಿಸಿದರು.
ಈಗ ರಾಜ್ಯದಲ್ಲಿ ಸದೃಢ ಸರಕಾರ ಮತ್ತು ಧೀಮಂತ ನಾಯಕ ಅಧಿಕಾರದಲ್ಲಿದ್ದಾರೆ. ಆದರೆ ಒಕ್ಕಲಿಗರು ಅದನ್ನು ದಿಕ್ಕು ತಪ್ಪಿಸಬಾರದು ಎಂದು ಕೆ.ಎಂ. ರಾಮಚಂದ್ರಪ್ಪ ಮನವಿ ಮಾಡಿದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, 2023ರ ಚುನಾವಣೆಯಲ್ಲಿ ಅಹಿಂದ ಸಮುದಾಯಗಳು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿವೆ. ಹಿಂದಿನ ಕಾಲದಿಂದಲೂ ಅಹಿಂದ ಸಮುದಾಯಗಳು ಮತ ಬ್ಯಾಂಕ್‍ಗಳಾಗಿದ್ದು, ಈಗ ಅಹಿಂದ ಸಮುದಾಯದ ಮುಖಂಡ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಮುಂದಿನ ಚುನಾವಣೆಯವರೆಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದರು.
ರಾಜ್ಯದಲ್ಲಿ ದಲಿತ, ಅಲ್ಪಸಂಖ್ಯಾತ ಮತ್ತು ಮಹಿಳೆಯರಲ್ಲಿ ಯಾರು ಮುಖ್ಯಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಮುಖಂಡರಾದ ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಆದರ್ಶ್ ಯಲ್ಲಪ್ಪ ಸೇರಿದಂತೆ ಮತ್ತಿತರರು ಇದ್ದರು.