×
Ad

ಎಡಗೈ, ಬಲಗೈ ಸಮುದಾಯಕ್ಕೆ ತಲಾ ಶೇ. 6 ರಷ್ಟು ಒಳ ಮೀಸಲಾತಿ: ಸದನದಲ್ಲಿ ಅಧಿಕೃತ ಘೋಷಣೆ ಮಾಡಿದ ಸಿಎಂ ಸಿದ್ದರಾಮಯ್ಯ

ಒಳ ಮೀಸಲಾತಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ತೀರ್ಮಾನ

Update: 2025-08-20 18:19 IST

ಸಿಎಂ ಸಿದ್ದರಾಮಯ್ಯ (Photo: X/@CMofKarnataka)

ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಮೀಸಲಾತಿ ವರ್ಗೀಕರಣ ಮಾಡಲು ಸಚಿವ ಸಂಪುಟ ಮಂಗಳವಾರ ತೀರ್ಮಾನಿಸಿತ್ತು. ಈ ಕುರಿತು ಇಂದು ಸದನದಲ್ಲಿ ಸಿಎಂ ಸಿದ್ದರಾಮಯ್ಯ ಮೀಸಲಾತಿ ಬಗ್ಗೆ ತೆಗೆದುಕೊಂಡು ನಿರ್ಣಯವನ್ನು ಅಧಿಕೃತವಾಗಿ ಘೋಷಣೆ ಮಾಡಿದರು.

ಮಂಗಳವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಎಡಗೈ ಸಮುದಾಯಕ್ಕೆ ಶೇ. 6 ರಷ್ಟು, ಬಲಗೈ ಸಮುದಾಯಕ್ಕೆ ಶೇ. 6 ರಷ್ಟು ಹಾಗೂ ಸ್ಪೃಶ್ಯ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲು ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಹೇಳಿದರು.

ನ್ಯಾ.ನಾಗಮೋಹನ್‌ ದಾಸ್ ವರದಿಯ ಶಿಫಾರಸುಗಳನ್ನು ಕೆಲವು ಮಾರ್ಪಾಡುಗಳೊಂದಿಗೆ ಒಳ ಮೀಸಲಾತಿ ಕಲ್ಪಿಸಲಾಗಿದೆ. A, B, C ಎಂದು ವರ್ಗೀಕರಣ ಮಾಡಿ ಮೀಸಲಾತಿ ಹಂಚಲಾಗಿದ್ದು, ಒಳ ಮೀಸಲಾತಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ತೀರ್ಮಾನಿಸಿದ್ದೇವೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

​ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಎ,ಬಿ,ಸಿ,ಡಿ,ಇ ಎಂದು ಪ್ರವರ್ಗಗಳನ್ನಾಗಿ ವಿಭಾಗೀಕರಿಸಿ ಮಾಡಿದ್ದ ಶಿಫಾರಸ್ಸನ್ನು ಸಚಿವ ಸಂಪುಟವು ಎ,ಬಿ,ಸಿ ಎಂದು ಮೂರು ಪ್ರವರ್ಗಗಳನ್ನಾಗಿ ವಿಭಾಗೀಕರಿಸಲು ಹಾಗೂ ಎಡಗೈ ಸಂಬಂಧಿತ ಜಾತಿಗಳುಳ್ಳ ಎ ಪ್ರವರ್ಗಕ್ಕೆ - ಶೇ. 6, ಬಲಗೈ ಸಂಬಂಧಿತ ಜಾತಿಗಳುಳ್ಳ ಬಿ ಪ್ರವರ್ಗಕ್ಕೆ - ಶೇ. 6 ಹಾಗೂ ಸಿ ಪ್ರವರ್ಗಕ್ಕೆ - ಶೇ.5 ರಷ್ಟು ಒಳಮೀಸಲಾತಿ ನೀಡಲು ತೀರ್ಮಾನಿಸಿದ್ದೇವೆ. ಪರಿಶಿಷ್ಟ ಜಾತಿಗಳಲ್ಲಿರುವ ಎಲ್ಲಾ 101 ಜಾತಿಗಳಿಗೆ ಶಿಕ್ಷಣ, ಉದ್ಯೋಗಾವಕಾಶ ಹಾಗೂ ಇನ್ನಿತರೆ ವಿಷಯಗಳಲ್ಲಿ ಅವಕಾಶಗಳನ್ನು ಒದಗಿಸುವಲ್ಲಿ ಸಮಾನತೆ ಮತ್ತು ನ್ಯಾಯ ಸಮ್ಮತತೆಯನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಈ ಮಾರ್ಪಾಡುಗಳನ್ನು ಮಾಡಲಾಗಿದೆ. ಈ ರೀತಿ ನಿರ್ಧಾರ ಮಾಡುವಾಗ ಸಚಿವ ಸಂಪುಟವು ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ನಮೂದಿಸಲಾದ ತತ್ವಗಳನ್ನು ಗಮನದಲ್ಲಿಟ್ಟುಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಸದನಕ್ಕೆ ಮಾಹಿತಿ ನೀಡಿದರು.

ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆಯನ್ನು ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿಕೊಂಡು, ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚಿಸಲು ತೀರ್ಮಾನಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News