ರಾಜ್ಯ ಕಾಂಗ್ರೆಸ್‍ನ ಕೊನೆ ಸಿಎಂ, ಸಿದ್ದರಾಮಯ್ಯ : ಎಚ್.ಡಿ.ಕುಮಾರಸ್ವಾಮಿ ಟೀಕೆ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್‍ನ ಕೊನೆಯ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಸೋಮವಾರ ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನಾಶವಾಗಿದೆ. ಕರ್ನಾಟಕದಲ್ಲಿ ಜಂಗಲ್ ರಾಜ್ ಶುರುವಾಗಿದೆ. ಉತ್ತಮ ಆಡಳಿತ ಎನ್ನುವುದು ಎಲ್ಲಿದೆ? ಅಧಿಕಾರಿಗಳನ್ನು ಗುಲಾಮರ ರೀತಿ ಈ ಸರಕಾರ ನಡೆಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಭರತ್ ರೆಡ್ಡಿ ಪರ ಡಿ.ಕೆ.ಶಿವಕುಮಾರ್ ಮಾತನಾಡುತ್ತಾರೆ. ಯಾಕೆಂದರೆ, ಅವರಿಗೆ ಸಿಎಂ ಆಗುವಾಗ ಒಂದು ಮತ ತಪ್ಪಬಾರದು ಎಂದು ಅವರ ಪರವಾಗಿ ಇರುತ್ತಾರೆ ಎಂದ ಅವರು, ಕರ್ತವ್ಯ ಲೋಪ ಎಂದು ಎಸ್ಪಿ ಅವರನ್ನು ಅಮಾನತು ಮಾಡಿದ್ದಾರೆ. ಹಾಗಾದರೆ, ಹೆಚ್ಚುವರಿ ಎಸ್ಪಿ, ಐಜಿ ಅವರು ಕೂಡ ಕರ್ತವ್ಯ ಲೋಪ ಎಸಗಿದ್ದಾರೆ. ಚಿನ್ನಸ್ವಾಮಿಯಲ್ಲಿ ಕ್ರೀಡಾಂಗಣದ ಮುಂದೆ ಕಾಲ್ತುಳಿತ ಪ್ರಕರಣ ಸಂಭವಿಸಿದಾಗ ಹಲವಾರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ. ಈಗ ಬಳ್ಳಾರಿಯಲ್ಲಿ ಕೇವಲ ಎಸ್ಪಿ ಮೇಲೆ ಮಾತ್ರ ಕ್ರಮವೇಕೆ ಎಂದು ಪ್ರಶ್ನಿಸಿದರು.
ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದ ಮೇಲೆ ಗಲಾಟೆಗಳು ಆಗುತ್ತಿವೆ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಅದಕ್ಕೆ ಗೃಹ ಸಚಿವ ಪರಮೇಶ್ವರ್ ಹಿಮ್ಮೇಳ ಹಾಡುತ್ತಿದ್ದಾರೆ. ಜನಾರ್ದನ ರೆಡ್ಡಿ ಅವರು ಸುಪ್ರೀಂ ಕೋರ್ಟ್ ಅನುಮತಿ ಪಡೆದು ಒಂದೂವರೆ ವರ್ಷದ ಹಿಂದೆ ಬಳ್ಳಾರಿಗೆ ಬಂದಿದ್ದಾರೆ. ಅವರು ಬಳ್ಳಾರಿಗೆ ಬಂದ ಮೇಲೆ ಎಷ್ಟು ಗಲಾಟೆ ಆಗಿದೆ? ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಬಗ್ಗೆ ಮಾಹಿತಿ ಕೊಡಿ ಎಂದು ಅವರು ಕೇಳಿದರು.
ನೀವೆಲ್ಲರೂ ಅಪರಾಧಿಯ ಪರ ನಿಂತಿರುವುದು ನಾಚಿಕೆಗೇಡಿನ ಸಂಗತಿ.ಅದರಲ್ಲೂ, ಅಸಮರ್ಥ ಗೃಹ ಸಚಿವರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ಏನೂ ಆಗುವುದಿಲ್ಲ. ಗೃಹ ಇಲಾಖೆ ಸತ್ತಿದೆಯೋ ಬದುಕಿದೆಯೋ ಎಂಬುದು ಗೊತ್ತಿಲ್ಲ. ಬಳ್ಳಾರಿಗೆ ಅಷ್ಟು ಗನ್‍ಗಳು ಎಲ್ಲಿಂದ, ಹೇಗೆ ಬಂದವು? ಅವೇನು ಪಾಕಿಸ್ತಾನದಿಂದ ಬಂದವಾ? ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರ ಕೊಡಲಿ ಎಂದು ಕುಮಾರಸ್ವಾಮಿ ಹೇಳಿದರು.
ಆದಾಯ ತೆರಿಗೆ ಇಲಾಖೆ ಮಾಡುತ್ತಿದೆ?:
ಮೃತ ಕಾರ್ಯಕರ್ತನ ಕುಟುಂಬಕ್ಕೆ ಪರಿಹಾರ ನೀಡಿದ್ದೀರಿ, ಸರಿ. ಆದರೆ, ಯಾವ ಖಾತೆಯಿಂದ ಆ ಹಣವನ್ನು ನೀಡಿದ್ದೀರಿ? ಅದಕ್ಕೆ ಆದಾಯ ತೆರಿಗೆ ಲೆಕ್ಕ ಇದೆಯೇ? ಚೀಲದಲ್ಲಿ ತುಂಬಿಕೊಂಡು ಕೊಟ್ಟರಲ್ಲ, ಆ ಹಣ ಯಾರದು? ಅದು ಎಲ್ಲಿಂದ ಬಂತು? 25 ಲಕ್ಷ ರೂಪಾಯಿ ಸರಕಾರದ ಹಣವೇ ಇಲ್ಲವೇ ಖಾಸಗಿ ಹಣವೇ ಎಂಬುದು ಗೊತ್ತಾಗಬೇಕಲ್ಲವೇ? ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ.
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ