×
Ad

ಸ್ವಿಸ್-ಭಾರತ ವಾಣಿಜ್ಯೋದ್ಯಮ ಸಂಘದ ಜೊತೆ ಒಪ್ಪಂದಕ್ಕೆ ಸಹಿ

Update: 2025-02-13 19:56 IST

ಬೆಂಗಳೂರು: ಅಂತಾರಾಷ್ಟ್ರೀಯ ವಾಣಿಜ್ಯ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಸ್ವಿಟ್ಜಲೆರ್ಂಡ್‍ನ ಸ್ವಿಸ್-ಭಾರತ ವಾಣಿಜ್ಯೋದ್ಯಮ ಸಂಘದ(ಎಸ್‍ಐಸಿಸಿಐ) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಗುರುವಾರ ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ನಡೆದ ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಸ್ವಿಟ್ಜಲೆರ್ಂಡ್‍ನ 19 ಪ್ರಮುಖ ಕಂಪೆನಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಬರಲಾಯಿತು.

ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ವ್ಯಾಪಾರ ಹಾಗೂ ಆರ್ಥಿಕ ಪಾಲುದಾರಿಕೆ ಒಪ್ಪಂದದ(ಟಿಇಪಿಎ) ಸದಸ್ಯ ದೇಶಗಳ ಜೊತೆಗೆ ಭಾರತ ಇತ್ತೀಚಿಗೆ ಮಾಡಿಕೊಂಡಿರುವ ಒಪ್ಪಂದದ ಬೆನ್ನಲ್ಲೇ, ಕರ್ನಾಟಕ ಸರಕಾರವು ಈ ಒಪ್ಪಂದಕ್ಕೆ ಸಹಿ ಹಾಕಿರುವುದು ಮಹತ್ವದ ವಿದ್ಯಮಾನವಾಗಿದೆ. ಈ ಒಪ್ಪಂದವು ಪರಸ್ಪರ ವಾಣಿಜ್ಯ ಹಾಗೂ ಆರ್ಥಿಕ ಬಾಂಧವ್ಯ ಉತ್ತೇಜಿಸಲು ನೆರವಾಗಲಿದೆ. ಕರ್ನಾಟಕದಲ್ಲಿ ತಮ್ಮ ವಹಿವಾಟು ವಿಸ್ತರಿಸಲು ಮುಂದಾಗಿರುವ ಸ್ವಿಸ್ ಕಂಪೆನಿಗಳ ವಿಶ್ವಾಸವನ್ನೂ ವೃದ್ಧಿಸಲಿದೆ ಎಂದು ತಿಳಿಸಿದರು.

ಒಪ್ಪಂದದ ಫಲವಾಗಿ, ಸ್ವಿಸ್ ಕಂಪೆನಿಗಳು ಮತ್ತು ಕರ್ನಾಟಕ ಸರಕಾರದ ನಡುವಣ ಸಹಯೋಗ ಹೆಚ್ಚಲಿದೆ. ಈ ಪಾಲುದಾರಿಕೆ ಮೂಲಕ ಹೊಸ ವಾಣಿಜ್ಯ ಅವಕಾಶಗಳು ತೆರೆದುಕೊಳ್ಳಲಿವೆ. ಜ್ಞಾನದ ವಿನಿಮಯ ನಡೆಯಲಿದೆ. ಮುಂಬರುವ ದಿನಗಳಲ್ಲಿ, ಕರ್ನಾಟಕದಲ್ಲಿನ ಪ್ರಮುಖ ವಲಯಗಳಲ್ಲಿ ಬಂಡವಾಳ ಹೂಡಿಕೆಯ ಅವಕಾಶಗಳನ್ನು ಗುರುತಿಸಲು, ರಾಜ್ಯದ ಚೈತನ್ಯಶೀಲ ಆರ್ಥಿಕತೆಯ ಪ್ರಗತಿಯಲ್ಲಿ ಭಾಗಿಯಾಗಲು ಸ್ವಿಸ್ ಉದ್ದಿಮೆಗಳಿಗೆ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಎಂ.ಬಿ. ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News