SIR | 44.48 ಲಕ್ಷ ಮತದಾರರನ್ನು ‘ಎಎಸ್‍ಡಿಡಿಒ’ ಎಂದು ಗುರುತಿಸಲಾಗಿದೆ : ಮುಖ್ಯ ಚುನಾವಣಾಧಿಕಾರಿ
ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್
ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯು ಜೂ.30ರಿಂದ ಆರಂಭವಾಗಿದ್ದು, ಮತದಾರರ ಮನೆ ಬಾಗಿಲಿಗೆ ಗಣತಿ ನಮೂನೆ (ಎನ್ಯುಮರೇಷನ್ ಫಾರಂ)ಗಳನ್ನು ಬೂತ್ ಮಟ್ಟದ ಅಧಿಕಾರಿ(ಬಿಎಲ್‍ಒ)ಗಳು ತಲುಪಿಸುತ್ತಿದ್ದು, 44,84,331 ಮತದಾರರನ್ನು ‘ಎಎಸ್‍ಡಿಡಿಒ’ (ABSENT, SHIFTING, DEAD, DUPLICATE, OTHER) ಎಂದು ಗುರುತಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.
ಬುಧವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜು.22ರ ಮಧ್ಯಾಹ್ನ 2 ಗಂಟೆವರೆಗೆ ಎಎಸ್‍ಡಿಡಿಒ ಎಂದು ಗುರುತಿಸಲಾಗಿರುವ 44,84,331 ಮತದಾರರ ಪೈಕಿ 5,87,457 ಮಂದಿ ಗಣತಿ ನಮೂನೆ ತಲುಪಿಸಲು ಲಭ್ಯವಾಗಿಲ್ಲ, 26,32,229 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ, 9,81,642 ಮಂದಿ ಮೃತಪಟ್ಟಿದ್ದಾರೆ, 2,70,659 ಮಂದಿ ಈಗಾಗಲೆ ಬೇರೆ ಕಡೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಎನ್ಯುಮರೇಷನ್ ಫಾರಂಗಳನ್ನು ಒಟ್ಟು 5,54,32,314 ಮತದಾರರ ಪೈಕಿ 5,53,70,473 ಮಂದಿಗೆ ವಿತರಿಸುವ ಮೂಲಕ ಶೇ.99.89ರಷ್ಟು ಪ್ರಗತಿ ಸಾಧಿಸಲಾಗಿದೆ. 3,67,81,041 ಎನ್ಯುಮರೇಷನ್ ಫಾರಂಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಶೇ.66.35ರಷ್ಟು ಪ್ರಗತಿ ಸಾಧಿಸಲಾಗಿದೆ. 1,41,66,942 ಎನ್ಯುಮರೇಷನ್ ಫಾರಂಗಳ ಡಿಜಿಟಲೀಕರಣ ಬಾಕಿಯಿದೆ ಎಂದು ಅವರು ತಿಳಿಸಿದರು.
22 ಜಿಲ್ಲೆಗಳ 184 ವಿಧಾನಸಭಾ ಕ್ಷೇತ್ರಗಳ 57,630 ಮತಗಟ್ಟೆಗಳಲ್ಲಿ ಶೇ.100ರಷ್ಟು, 12 ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳ 1,248 ಮತಗಟ್ಟೆಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎನ್ಯುಮರೇಷನ್ ಫಾರಂಗಳನ್ನು ವಿತರಣೆ ಮಾಡಲಾಗಿದೆ. 19 ಜಿಲ್ಲೆಗಳ 118 ವಿಧಾನಸಭಾ ಕ್ಷೇತ್ರಗಳ 10,608 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎನ್ಯುಮರೇಷನ್ ಫಾರಂಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅನ್ಬುಕುಮಾರ್ ಹೇಳಿದರು.
ಹಾವೇರಿ-ಶೇ.84.78, ಚಿಕ್ಕಬಳ್ಳಾಪುರ-ಶೇ.84.78, ಉತ್ತರ ಕನ್ನಡ-ಶೇ.82.90, ಹಾಸನ-ಶೇ.81.66, ಚಿಕ್ಕಮಗಳೂರು-ಶೇ.80.78, ಕೊಪ್ಪಳ-ಶೇ.80.72, ದಾವಣಗೆರೆ-ಶೇ.80.43, ಬೆಂಗಳೂರು ಗ್ರಾಮಾಂತರ-ಶೇ.80.04, ಉಡುಪಿ-ಶೇ.80.03 ಹಾಗೂ ಚಿತ್ರದುರ್ಗ-ಶೇ.80.02ರಷ್ಟು ಎನ್ಯುಮರೇಷನ್ ಫಾರಂಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಮಂದಗತಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಎನ್ಯುಮರೇಷನ್ ಫಾರಂಗಳ ಡಿಜಿಟಲೀಕರಣ ಮಂದಗತಿಯಲ್ಲಿ ಸಾಗಿದೆ. ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತ, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು, ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು ನಗರ ಜಿಲ್ಲೆ-ಶೇ.33.31, ಬಿಬಿಎಂಪಿ ಉತ್ತರ ಜಿಲ್ಲೆ-ಶೇ.29.99, ಬಿಬಿಎಂಪಿ ಕೇಂದ್ರ ಜಿಲ್ಲೆ-ಶೇ.27.78, ಬಿಬಿಎಂಪಿ ದಕ್ಷಿಣ ಜಿಲ್ಲೆ-25.97ರಷ್ಟು ಎನ್ಯುಮರೇಷನ್ ಫಾರಂಗಳ ಡಿಜಿಟಲೀಕರಣ ಮಾಡಲಾಗಿದೆ. 5,93,787 ಮಂದಿ ಆನ್‍ಲೈನ್ ಮೂಲಕ ತಮ್ಮ ಎನ್ಯುಮರೇಷನ್ ಫಾರಂ ಅನ್ನು ಭರ್ತಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 24,58,855 ಮತದಾರರನ್ನು ಎಎಸ್‍ಡಿಡಿಒ ಎಂದು ಗುರುತಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.
ಎಎಸ್‍ಡಿಡಿಒ ಎಂದು ಗುರುತಿಸಲಾಗಿರುವ ಮತದಾರರ ಮಾಹಿತಿಯನ್ನು ಬಿಎಲ್‍ಒಗಳ ಮೂಲಕ ಬಿಎಲ್‍ಎಗಳಿಗೆ, ಚುನಾವಣಾ ನೋಂದಣಾಧಿಕಾರಿ ಮೂಲಕ ವಿಧಾನಸಭಾ ಕ್ಷೇತ್ರವಾರು, ಜಿಲ್ಲಾ ಚುನಾವಣಾಧಿಕಾರಿ ಮೂಲಕ ಜಿಲ್ಲಾ ಮಟ್ಟದ ಮಾಹಿತಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ತಲುಪಿಸಲಾಗುತ್ತಿದೆ. ರಾಜಕೀಯ ಪಕ್ಷಗಳು ಪಟ್ಟಿಯನ್ನು ಪರಿಶೀಲಿಸಿ, ಬಿಎಲ್‍ಒಗಳಿಂದ ಮಾಹಿತಿ ಸಂಗ್ರಹಣೆಯಲ್ಲಿ ಲೋಪವಾಗಿದ್ದರೆ ಅದನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅನ್ಬುಕುಮಾರ್ ಹೇಳಿದರು.
ಎಎಸ್‌ಡಿಡಿಒ ಎಂದರೇನು?
ಎ-ಅಬ್ಸೆಂಟ್(ಬಿಎಲ್‌ಒ ಗಣತಿ ನಮೂನೆ ತಲುಪಿಸುವ ವೇಳೆ ಮತದಾರ ಲಭ್ಯವಾಗದಿರುವುದು), ಎಸ್-ಪರ್ಮನೆಂಟ್ ಶಿಫ್ಟಿಂಗ್(ಖಾಯಂ ಆಗಿ ಆ ಮತಗಟ್ಟೆ ವ್ಯಾಪ್ತಿಯಿಂದ ಸ್ಥಳಾಂತರಗೊಂಡಿರುವುದು), ಡಿ-ಡೆಡ್(ಮೃತಪಟ್ಟಿರುವ ಮತದಾರರು), ಡಿ-ಡೂಪ್ಲಿಕೇಟ್(ಒಂದು ಕಡೆ ಮತ ಇದ್ದರೂ ಮತ್ತೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ಹೆಸರು ನೋಂದಾಯಿಸಿಕೊಂಡವರು), ಒ-ಅದರ್(ಇತರರು).
‘ಎನ್ಯುಮರೇಷನ್ ಫಾರಂ ಸಿಗದಿದ್ದರೆ ಏನು ಮಾಡಬೇಕು?’: ‘2026ರ ಜೂ.16ರ ವರೆಗೆ ಮತದಾರರಾಗಿ ನೋಂದಣಿಯಾಗಿರುವವರ ಮನೆ ಬಾಗಿಲಿಗೆ ಎನ್ಯುಮರೇಷನ್ ಫಾರಂಗಳನ್ನು ತಲುಪಿಸಲಾಗುತ್ತಿದೆ. ಒಂದು ವೇಳೆ ಯಾರಿಗಾದರೂ ಎನ್ಯುಮರೇಷನ್ ಫಾರಂ ಸಿಗದಿದ್ದರೆ ಅಥವಾ ಮತದಾರರ ಪಟ್ಟಿಯಲ್ಲಿರುವ ವಿಳಾಸದಿಂದ ಸ್ಥಳಾಂತರಗೊಂಡಿದ್ದರೆ ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಹೊಸದಾಗಿ ಅರ್ಜಿ ನಮೂನೆ 6 ಅನ್ನು ಆನ್‍ಲೈನ್ ಅಥವಾ ಆಫ್ ಲೈನ್ ಮೂಲಕ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಹೊಸ ವಿಳಾಸದಲ್ಲಿನ ಮತಗಟ್ಟೆಯ ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳಬಹುದು’
-ವಿ.ಅನ್ಬುಕುಮಾರ್, ಮುಖ್ಯ ಚುನಾವಣಾಧಿಕಾರಿ
‘ಯಾವ ನೋಟಿಸ್‍ಗೆ, ಯಾವ ದಾಖಲೆ ಕೊಡಬೇಕು?’: ‘ಕರಡು ಮತದಾರರ ಪಟ್ಟಿ ಪ್ರಕಟವಾಗುವವರೆಗೆ ನಮಗೆ ಚುನಾವಣಾ ನೋಂದಣಾಧಿಕಾರಿ, ಮತದಾರರಿಗೆ ಯಾವ ಕಾರಣಕ್ಕಾಗಿ ನೋಟಿಸ್ ನೀಡಲಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಯಾವ ಮತದಾರರು, ಯಾವ ಕಾರಣಕ್ಕಾಗಿ, ಚುನಾವಣಾ ಆಯೋಗ ನಿಗದಿ ಮಾಡಿರುವ 12 ದಾಖಲೆಗಳ ಪೈಕಿ, ಯಾವ ದಾಖಲೆಯನ್ನು ಸಲ್ಲಿಸಬೇಕು ಎಂಬುದರ ಕುರಿತು ಮಾಹಿತಿ ನೀಡಲಾಗುವುದು’ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.