ಸಂಪುಟ ವಿಸ್ತರಣೆ ವಾರಂತ್ಯಕ್ಕೆ ಮುಂದೂಡಿಕೆ?
ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಮತ್ತು ವಿದ್ಯಾರ್ಥಿಗಳ ಮೇಲಿನ ಪೊಲೀಸರ ಹಲ್ಲೆ, ದೌರ್ಜನ್ಯದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಹೀಗಾಗಿ ರಾಜ್ಯ ಸಂಪುಟ ವಿಸ್ತರಣೆಯು ಇನ್ನು ಒಂದು ವಾರ ಕಾಲ ಮುಂದೂಡಿಕೆಯಾದಂತೆ ಆಗಿದೆ.
ಕೆಲ ದಿನಗಳಿಂದ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವುದು ಖಚಿತ ಎಂಬಂತಹ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ದಿಲ್ಲಿಯಲ್ಲಿನ ದಿಢೀರ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ತೀವ್ರಗೊಂಡಿದ್ದರಿಂದ ಸಂಪುಟ ವಿಸ್ತರಣೆ ಇನ್ನೂ ಒಂದೆರಡು ದಿನ ವಿಳಂಬವಾಗುವ ಸಾಧ್ಯತೆಗಳಿವೆ.
ಶುಕ್ರವಾರ (ಜು.24)ಅಥವಾ ಮುಂದಿನ ವಾರದಲ್ಲಿ ಸಂಪುಟ ವಿಸ್ತರಣೆ ಆಗುವುದು ಖಚಿತವಾಗಿದೆ. ಸಂಪುಟ ವಿಸ್ತರಣೆ ಕುರಿತಂತೆ ಹೊಸದಿಲ್ಲಿಯಲ್ಲಿ ನಿನ್ನೆ ಇಡೀ ದಿನ ಯಾವುದೇ ಚರ್ಚೆಗಳಾಗದೇ ಸಚಿವ ಸ್ಥಾನದ ಆಕಾಂಕ್ಷಿ ಹಿರಿಯ-ಕಿರಿಯ ಶಾಸಕರುಗಳು ಗಲಿಬಿಲಿಗೊಂಡಿದ್ದಾರೆ.
ಆಗಸ್ಟ್ ಮೊದಲ ವಾರದಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗುವುದರಿಂದ ಅದಕ್ಕೂ ಮುಂಚಿತವಾಗಿಯೇ ಸಚಿವ ಸಂಪುಟ ವಿಸ್ತರಣೆ ಮಾಡಿ, ಸಚಿವರಿಗೆ ಖಾತೆಗಳ ಜವಾಬ್ದಾರಿಯನ್ನು ಹಂಚಬೇಕು ಎಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಇಚ್ಛೆಯಾಗಿತ್ತು.
ಆ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸುವ ಸಲುವಾಗಿಯೇ ಜು.22ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಆಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೊಸದಿಲ್ಲಿಗೆ ತೆರಳಿದ್ದರು. ಹೈಕಮಾಂಡ್ ನಾಯಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಕುರಿತು ವರಿಷ್ಠರೊಂದಿಗೆ ರಾಜ್ಯ ನಾಯಕರು ಚರ್ಚೆ ನಡೆಸಲು ಸಾಧ್ಯವಾಗಿಲ್ಲ.
ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವುದರಿಂದ ಹೈಕಮಾಂಡ್‍ನ ಎಲ್ಲ ನಾಯಕರು ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಕುರಿತು ನಾಯಕರ ಜೊತೆಗೆ ಚರ್ಚೆಗೆ ಸಮಯ ಸಿಕ್ಕಿಲ್ಲ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮುಖಂಡರು ರಾಜ್ಯಕ್ಕೆ ಹಿಂದಿರುಗಿದ್ದಾರೆ.
ಚರ್ಚೆ ನಡೆದರೆ ಮತ್ತೆ ದಿಲ್ಲಿಗೆ: ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರು ಚರ್ಚೆಗೆ ಆಹ್ವಾನ ನೀಡಿದರೆ ಮತ್ತೆ ಹೊಸದಿಲ್ಲಿಗೆ ಹೋಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ಕುರಿತು ಚರ್ಚೆ ನಡೆಸಲು ಪಕ್ಷದ ವರಿಷ್ಠ ನಾಯಕರು ಆಹ್ವಾನಿಸಿದರೆ ಮತ್ತೆ ಹೊಸದಿಲ್ಲಿಗೆ ಬರುತ್ತೇವೆ ಎಂದು ಹೇಳಿದರು. ಇದಕ್ಕೂ ಮುನ್ನ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯ ಅವರು ಕೆಲ ಶಾಸಕರ ಜೊತೆ ಉಪಾಹಾರ ಕೂಟ ನಡೆಸಿ ಸಮಾಲೋಚಿಸಿದರು.