×
Ad

ಎಸ್‍ಐಆರ್ : ರಾಜ್ಯದಲ್ಲಿ ಶೇ.61ರಷ್ಟು ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ಪೂರ್ಣ

Update: 2026-01-17 19:37 IST

ಸಾಂದರ್ಭಿಕ ಚಿತ್ರ | Photo Credit ; PTI

ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್)ಗೆ ಪೂರ್ವಭಾವಿಯಾಗಿ ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಸುತ್ತಿರುವ ಮತದಾರರ ಪಟ್ಟಿಯ ಪರಿಶೀಲನೆ ಹಾಗೂ ಮ್ಯಾಪಿಂಗ್ ಕಾರ್ಯವು ಶೇ.61ರಷ್ಟು ಪೂರ್ಣಗೊಂಡಿದೆ.

ಕರ್ನಾಟಕದಲ್ಲಿ 2002ರಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ನಡೆದಿತ್ತು. ಇದೀಗ 23 ವರ್ಷಗಳ ಬಳಿಕ ಪುನಃ ಎಸ್‍ಐಆರ್ ನಡೆಸಲು ಉದ್ದೇಶಿಸಲಾಗಿದೆ. 2002ರಲ್ಲಿ ರಾಜ್ಯದಲ್ಲಿ 3.40 ಕೋಟಿ ಮತದಾರರಿದ್ದರು. 2025ರ ಮತದಾರರ ಪಟ್ಟಿಯಂತೆ ಈಗ 5.57 ಕೋಟಿ ಮತದಾರರಿದ್ದಾರೆ.

2025ರ ಮತದಾರರ ಪಟ್ಟಿಯಲ್ಲಿ ಗುರುತಿಸಲಾದ ನಿಗದಿತ ವಯಸ್ಸು 40 ವರ್ಷ ಹೊಂದಿರುವ 1.92 ಕೋಟಿ ಮತದಾರರ ಮ್ಯಾಪಿಂಗ್ ಜ.15ರ ವೇಳೆಗೆ ಪೂರ್ಣಗೊಂಡಿದೆ. ಈ ತಿಂಗಳ ಅಂತ್ಯದೊಳಗೆ ಇನ್ನೂ ಕನಿಷ್ಠ ಒಂದು ಕೋಟಿ ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ನಿಗದಿತ ವಯಸ್ಸಿನ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಕೊಪ್ಪಳ(ಶೇ.75.1), ಚಿತ್ರದುರ್ಗ (ಶೇ.75.7), ಹಾವೇರಿ (ಶೇ.75.1), ತುಮಕೂರು (ಶೇ.76.4) ಮತ್ತು ವಿಜಯಪುರ (ಶೇ.70.8), ಕೊಡಗು(ಶೇ.70.48), ಚಾಮರಾಜನಗರ(ಶೇ.75.5), ಉಡುಪಿ(ಶೇ.66.5), ದಕ್ಷಿಣ ಕನ್ನಡ(ಶೇ.58.6), ಮೈಸೂರು(ಶೇ.64.3), ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಕೇಂದ್ರ ವಲಯ-ಶೇ.27.47, ಉತ್ತರ ವಲಯ-ಶೇ.27.33 ಮತ್ತು ದಕ್ಷಿಣ ವಲಯ-ಶೇ.26.05ರಷ್ಟು ಪ್ರಗತಿ ಸಾಧಿಸಲಾಗಿದೆ ಎನ್ನಲಾಗಿದೆ.

ರಾಜ್ಯಾದ್ಯಂತ ಇದುವರೆಗೆ 1.35 ಕೋಟಿ ‘ಪ್ರೊಜೆನಿ’(ಭವಿಷ್ಯದ ಮತದಾರರ ಮಾಹಿತಿ) ದಾಖಲೆಗಳ ಮ್ಯಾಪಿಂಗ್ ಪೂರ್ಣಗೊಂಡಿದೆ. ಬೆಳಗಾವಿ, ಬಾಗಲಕೋಟೆ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈ ಪ್ರೊಜೆನಿ ಮಾಹಿತಿಯ ಸಂಗ್ರಹ ಉತ್ತಮವಾಗಿದ್ದರೆ, ಬೆಂಗಳೂರು ವಲಯಗಳಲ್ಲಿ ಮೂಲಮಟ್ಟದ ಪರಿಶೀಲನೆ ಪೂರ್ಣಗೊಳ್ಳದ ಕಾರಣ ಕಡಿಮೆ ಪ್ರಗತಿ ಕಂಡುಬಂದಿದೆ.

ಎಸ್‍ಐಆರ್ ಸಿದ್ಧತೆಯ ಎರಡನೆ ಹಂತವಾಗಿ 2002ನೆ ಸಾಲಿನ ನಂತರ ಜನಿಸಿದ ಮತದಾರರ (ಪ್ರೊಜೆನಿ) ಮ್ಯಾಪಿಂಗ್ ನಡೆಯುತ್ತಿದೆ. ಕಟ್‍ಆಫ್ ವಯಸ್ಸು ತಲುಪಿದ ಮತದಾರರ ಜೊತೆಗೆ ಮುಂದಿನ ವರ್ಷಗಳಲ್ಲಿ ಮತದಾನ ಹಕ್ಕು ಪಡೆಯಲಿರುವ ಯುವಜನರ ಮಾಹಿತಿಯನ್ನೂ ಅಧಿಕಾರಿಗಳು ನವೀಕರಿಸುತ್ತಿದ್ದಾರೆ.

ಮುಂದಿನ ಎರಡು ವಾರಗಳಲ್ಲಿ ಬಿಎಲ್‍ಒಗಳು ಮನೆಮನೆಗೆ ಭೇಟಿ ನೀಡಿ ಗುರುತು ಮತ್ತು ವಿಳಾಸ ಪರಿಶೀಲನೆ, ನಕಲಿ ಅಥವಾ ಸ್ಥಳಾಂತರಗೊಂಡ ದಾಖಲೆಗಳ ವಜಾ ಹಾಗೂ ಯಾವುದೇ ಅರ್ಹ ಮತದಾರ ಹೊರಗುಳಿಯದಂತೆ ಖಚಿತಪಡಿಸುವ ಕಾರ್ಯ ನಡೆಸಲಿದ್ದಾರೆ. ಅಂತಿಮವಾಗಿ ಮತದಾರರ ಪಟ್ಟಿಯನ್ನು ಪ್ರಕಟಿಸುವ ಮೊದಲು ಇನ್ನಷ್ಟು ವಿಚಾರಣೆ ಹಾಗೂ ಪರಿಶೀಲನೆ ಪ್ರಕ್ರಿಯೆಗಳು ನಡೆಯಲಿವೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News