×
Ad

‘ಆಳಂದ ಮತಗಳವು ಪ್ರಕರಣ’ ತನಿಖೆಗೆ ಎಸ್‍ಐಟಿ ರಚನೆ ಮಾಡಿ ಆದೇಶ

Update: 2025-09-20 20:23 IST

ಬೆಂಗಳೂರು, ಸೆ. 20 : ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿನ 256 ಮತಗಟ್ಟೆಗಳ ವ್ಯಾಪ್ತಿಯಲ್ಲಿನ 6,670 ಮಂದಿ ಮತದಾರರನ್ನು ಮತದಾರರ ಪಟ್ಟಿಯಿಂದ ಅನಧಿಕೃತವಾಗಿ ಕೈಬಿಟ್ಟ ಪ್ರಕರಣ ಸಂಬಂಧ ಸಿಐಡಿ ಘಟಕದ ಅಪರ ಪೋಲೀಸ್ ಮಹಾನಿರ್ದೇಶಕ ಬಿ.ಕೆ.ಸಿಂಗ್ ನೇತೃತ್ವದಲ್ಲಿ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‍ಐಟಿ)ವನ್ನು ರಚನೆ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ.

ಶನಿವಾರ ಒಳಾಡಳಿತ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರು ಆದೇಶ ಹೊರಡಿಸಿದ್ದು, ಸಿಐಡಿಯ ಹಿರಿಯ ಅಧಿಕಾರಿ ಬಿ.ಕೆ.ಸಿಂಗ್ ನೇತೃತ್ವದ ಸಮಿತಿಯಲ್ಲಿ ಐಪಿಎಸ್ ಅಧಿಕಾರಿಗಳಾದ ಸಿಸಿಡಿ, ಸಿಐಡಿ ಪೊಲೀಸ್ ಅಧೀಕ್ಷಕ ಸೈದುಲ್ ಅದಾವತ್, ಎಸ್‍ಇಡಿ ಸಿಐಡಿಯ ಪೊಲೀಸ್ ಅಧೀಕ್ಷಕಿ ಶುಭಾನ್ವಿತ ಅವರು ಸದಸ್ಯರಾಗಿದ್ದಾರೆ ಎಂದು ತಿಳಿಸಲಾಗಿದೆ.

ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿಯವರು ಇತ್ತೀಚೆಗೆ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮತಗಳ್ಳವು ಪ್ರಕರಣ ಸಂಬಂಧ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೆ ರಾಜ್ಯ ಸರಕಾರ ಈ ಪ್ರಕರಣ ಸಂಬಂಧ ತನಿಖೆಗೆ ಎಸ್‍ಐಟಿ ರಚನೆ ಮಾಡಿದೆ.

ಚುನಾವಣಾ ಆಯೋಗಕ್ಕೆ ಮಾಜಿ ಶಾಸಕ ಬಿ.ಆರ್.ಪಾಟೀಲ್ 2023ರಲ್ಲಿ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಆಯೋಗವು ಈ ಕುರಿತಂತೆ ಪರಿಶೀಲಿಸಿದ್ದು ಒಟ್ಟು 6,018 ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವಂತೆ ಆನ್‍ಲೈನ್ ಅಪ್ಲಿಕೇಷನ್‍ಗಳಿಗೆ ಅರ್ಜಿಗಳು ಸ್ವೀಕೃತವಾಗಿದ್ದು, ಆ ಪೈಕಿ 24 ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಪುರಸ್ಕರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದು ಕಂಡು ಬಂದಿರುತ್ತದೆ.

ಆದರೆ, 5,994 ಅರ್ಜಿಗಳನ್ನು ಪರಿಶೀಲಿಸಿದಾಗ ಸದರಿ ಅರ್ಜಿಗಳನ್ನು ಯಾರೋ, ಯಾವುದೋ ದುರುದ್ದೇಶದಿಂದ ವಿವಿಧ ಮೊಬೈಲ್ ಸಂಖ್ಯೆಗಳನ್ನು ಉಪಯೋಗಿಸಿ, ಮೂಲ ಮತದಾರರ ಗಮನಕ್ಕೆ ಬಾರದಂತೆ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡಲು ಅರ್ಜಿ ಸಲ್ಲಿಸಿರುವುದು ಕಂಡು ಬಂದಿದೆ ಎಂದು ಕೆಎಎಸ್ ಅಧಿಕಾರಿ ಮಮತಾ ಕುಮಾರಿ ವಿಚಾರಣೆ 2023ರ ಫೆಬ್ರವರಿ 21ರಂದು ನೀಡಿದ ದೂರಿನ ಆಧಾರದ ಮೇಲೆ ಆಳಂದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಸದರಿ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಇತರೆ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳಲು ರಾಜ್ಯದ ಅಪರಾಧ ತನಿಖಾ ಸಂಸ್ಥೆಯಾದ ಸಿಐಡಿಯ ಪೊಲೀಸ್ ಮಹಾನಿರ್ದೇಶಕರು, ಸಿಐಡಿ, ಆರ್ಥಿಕ ಅಪರಾಧಗಳು ಮತ್ತು ವಿಶೇಷ ಘಟಕಗಳು ರವರ ಮೇಲ್ವಿಚಾರಣೆಯಲ್ಲಿ ಈ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿದೆ.

ಕರ್ನಾಟಕ ರಾಜ್ಯ ಕ್ಷೇತ್ರ ವ್ಯಾಪ್ತಿಯನ್ನು ನೀಡುವಂತೆ ಮತ್ತು ವಿಶೇಷ ತನಿಖಾ ತಂಡವು ತನ್ನ ತನಿಖಾ ವರದಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ-193ರಡಿ ಸಕ್ಷಮ ನ್ಯಾಯಾಲಯಗಳಿಗೆ ಸಲ್ಲಿಸಲು ಅಧಿಕಾರ ನೀಡಲಾಗಿದೆ.

ಸದರಿ ಎಸ್‍ಐಟಿ ತಂಡಕ್ಕೆ ಮೇಲ್ಕಂಡ ಪ್ರಕರಣವು ಸೇರಿದಂತೆ ಹಾಗೂ ಈ ಸಂಬಂಧ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ ದಾಖಲಾಗುವ ಇತರೆ ಎಲ್ಲ ಕ್ರಿಮಿನಲ್ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸುವುದು ಹಾಗೂ ಅಗತ್ಯ ಸಿಬ್ಬಂದಿಯನ್ನು ಒದಗಿಸಬೇಕು. ಅಲ್ಲದೆ, ಶೀಘ್ರದಲ್ಲೇ ತನಿಖೆ ಪೂರ್ಣಗೊಳಿಸಿ ವರದಿಯನ್ನು ಸಕ್ಷಮ ನ್ಯಾಯಾಲಯಗಳಿಗೆ ಸಲ್ಲಿಸತಕ್ಕದ್ದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News