ಮೂರನೆ ದಿನವೂ ವೇಗ ಪೆಡೆದುಕೊಳ್ಳದ ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ’
ಬೆಂಗಳೂರು: ರಾಜ್ಯದ ಎಲ್ಲ ಜನರ ಸ್ಥಿತಿಗತಿ ಅರಿತು ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಮ್ಮಿಕೊಂಡಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ’ ಕಾರ್ಯಕ್ಕೆ ಮೂರನೆ ದಿನ ಬುಧವಾರವೂ ವೇಗ ದೊರೆಯಲಿಲ್ಲ.
ಮೊಬೈಲ್‍ಫೋನ್ ನೆಟ್‍ವರ್ಕ್ ಸಮಸ್ಯೆ, ಸರ್ವರ್ ಸಮಸ್ಯೆ, ಲಾಗಿನ್ ಸಮಸ್ಯೆ ಮೂರನೆ ದಿನವೂ ಮುಂದುವರೆದಿದ್ದು, ನಿರೀಕ್ಷಿತ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳುವುದು ಅನುಮಾನವಾಗಿದೆ. ರಾಜ್ಯದ ಒಟ್ಟು ಜನ ಸಂಖ್ಯೆಯಲ್ಲಿ ಶೇ.20ಕ್ಕೂ ಹೆಚ್ಚು ಪಾಲು ಹೊಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ದ ವ್ಯಾಪ್ತಿಯಲ್ಲಿ ಈವರೆಗೂ ಸಮೀಕ್ಷೆ ಆರಂಭಗೊಂಡಿಲ್ಲ. ಆದರೆ, ಬೆಂಗಳೂರು ನಗರ ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭಗೊಂಡಿದೆ.
ಬುಧವಾರ ಇಡೀ ದಿನ ತಾಂತ್ರಿಕ ತೊಂದರೆ ಕಾಡಿದೆ. ಕೆಲವೊಮ್ಮೆ ಆಪ್ ತೆರೆದುಕೊಳ್ಳುತ್ತಿಲ್ಲ. ತೆರೆದುಕೊಂಡರೂ ಲೊಕೇಷನ್ ಸರಿಯಾಗಿ ತೋರಿಸುತ್ತಿಲ್ಲ. ಕುಟುಂಬ ಪಟ್ಟಿಯನ್ನೂ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮೊದಲಿಗೆ ಲೋಡಿಂಗ್ ಎಂದು ತೋರಿಸುತ್ತದೆ. ಕೆಲ ನಿಮಿಷದ ಬಳಿಕ ಎರರ್ ಎಂದು ತೋರಿಸುತ್ತಿದೆ. ದಿನವಿಡೀ ಇದೇ ಕತೆಯಾಗಿದೆ ಎಂದು ಸಮೀಕ್ಷೆದಾರರು ಬೇಸರ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸ್ವಕ್ಷೇತ್ರದಲ್ಲೂ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ಆಕ್ಷೇಪಗಳಿವೆ.
ಇಲ್ಲಿಯವರೆಗೆ ರಾಜ್ಯ ಎಲ್ಲ ಜಿಲ್ಲೆಗಳಲ್ಲಿ 3,19,829 ಮಂದಿಯ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ 23,593, ಬಳ್ಳಾರಿ 3,641, ಬೆಳಗಾವಿ 26,494, ಬೆಂಗಳೂರು ಗ್ರಾಮಾಂತರ 2,150, ಬೆಂಗಳೂರು ನಗರ 1,168, ಬೀದರ್ 7,407, ಚಾಮರಾಜನಗರ 3,658, ಚಿಕ್ಕಬಳ್ಳಾಪುರ 2,591, ಚಿಕ್ಕಮಗಳೂರು 1,21,127, ಚಿತ್ರದುರ್ಗ 16,957, ದಕ್ಷಿಣ ಕನ್ನಡ 4,603, ದಾವಣಗೆರೆ 16,057 ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ.
ಧಾರವಾಡ 13,363, ಗದಗ 18,892, ಹಾಸನ ಜಿಲ್ಲೆಯಲ್ಲಿ 7,671, ಹಾವೇರಿ 30,791, ಕಲಬುರಗಿ 22,078, ಕೊಡಗು 4,402, ಕೋಲಾರ 5,737, ಕೊಪ್ಪಳ 13,903, ಮಂಡ್ಯ 17,465, ಮೈಸೂರು 4,982, ರಾಯಚೂರು 10,728, ಬೆಂಗಳೂರು ದಕ್ಷಿಣ 4,932, ಶಿವಮೊಗ್ಗ 7,628, ತುಮಕೂರು 3,121, ಉಡುಪಿ 1,173, ಉತ್ತರ ಕನ್ನಡ 11,879, ವಿಜಯನಗರ 6,568, ವಿಜಯಪುರ 6,828 ಮತ್ತು ಯಾದಗಿರಿ ಜಿಲ್ಲೆಯಲ್ಲಿ 7,242 ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಆಯೋಗವು ಅಂಕಿ-ಅಂಶಗಳನ್ನು ಪ್ರಕಟಿಸಿದೆ.
‘ಇಲ್ಲಿಯವರೆಗೆ ರಾಜ್ಯ ಎಲ್ಲ ಜಿಲ್ಲೆಗಳಲ್ಲಿರುವ 84,180 ಕುಟುಂಬಗಳ 3,19,829 ಮಂದಿಯ ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಸೋಮವಾರದಂದು 10,642 ಹಾಗೂ ಮಂಗಳವಾರದಂದು 60,362, ಬುಧವಾರ 2,48,825 ಮಂದಿಯ ಸಮೀಕ್ಷೆಯ ಪೂರ್ಣಗೊಂಡಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ.ದಯಾನಂದ್ ತಿಳಿಸಿದ್ದಾರೆ.