×
Ad

ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಮೇಲೆ ಮೇಲ್ಮನೆಯಲ್ಲಿ ವಿಶೇಷ ಚರ್ಚೆ

Update: 2025-12-10 23:52 IST

ಬೆಳಗಾವಿ(ಸುವರ್ಣವಿಧಾನಸೌಧ): ಚಳಿಗಾಲದ ಅಧಿವೇಶನ ಆರಂಭಗೊಂಡ ಮೂರನೇ ದಿನವಾದ ಬುಧವಾರ (ಡಿ.10) ಮೇಲ್ಮನೆಯಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು.

ಊಟದ ವಿರಾಮದ ನಂತರ ಮಧ್ಯಾಹ್ನ 3.15ಕ್ಕೆ ಪುನಾರಂಭಗೊಂಡ ಕಲಾಪದಲ್ಲಿ ಸಭಾಪತಿಗಳು, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನದ ಬಗ್ಗೆ, ಅರಣ್ಯ ಭೂಮಿ ಅತಿಕ್ರಮಣ, ಸಂತ್ರಸ್ತರ ಸಮಸ್ಯೆ ಹಾಗೂ ಪರಿಹಾರೋಪಾಯಗಳು, ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು, ಉದ್ಯೋಗ ಸೃಷ್ಟಿಗೆ ಕೈಗೊಳ್ಳಬೇಕಾಗಿರುವ ಕ್ರಿಯಾ ಯೋಜನೆಗಳು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ, ಕೈಗಾರಿಕೆಗಳ ಸ್ಥಾಪನೆ ಕುರಿತು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಬಗ್ಗೆ ಹಾಗೂ ಕನ್ನಡ ಶಾಲೆಗಳ ಪುನರ್ ನಿರ್ಮಾಣ ಸೇರಿದಂತೆ ನಾನಾ ವಿಷಯಗಳ ಚರ್ಚೆಗೆ ಅವಕಾಶ ಕಲ್ಪಿಸಿದರು.

ಪರಿಷತ್ ಸದಸ್ಯ ನಿರಾಣಿ ಹನುಮಂತಪ್ಪ ರುದ್ರಪ್ಪ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಬೇರೆ ಬೇರೆ ವಿಷಯಗಳಿಗೆ ಹೆಚ್ಚಿನ ಸಮಯ ಚರ್ಚಿಸಲು ಅವಕಾಶ ಸಿಗಬೇಕು ಎನ್ನುವ ಉದ್ದೇಶದೊಂದಿಗೆ ಬೆಳಗಾವಿಯಲ್ಲಿ ಕಟ್ಟಿದ ಸುವರ್ಣ ವಿಧಾನಸೌಧದ ಹಿನ್ನೆಲೆಯನ್ನು ನಾವು ಅರ್ಥೈಸಿಕೊಳ್ಳಬೇಕು. ಈ ಭಾಗದ ಬಗ್ಗೆ ಅಧ್ಯಯನ ಮಾಡಿ ಡಾ.ನಂಜುಂಡಪ್ಪ ಅವರು ವರದಿ ನೀಡಿ 20 ವರ್ಷಗಳಾದರೂ ಉ.ಕ. ಭಾಗ ಸಂಪೂರ್ಣ ಅಭಿವೃದ್ಧಿಯಾಗದೇ ಇರುವುದು ವಿಷಾದದ ಸಂಗತಿ ಎಂದರು.

ಡಾ.ನಂಜುಂಡಪ್ಪ ಅವರು 2002-03ರಲ್ಲಿ ಈ ಭಾಗದಲ್ಲಿನ ಅಸಮತೋಲನ ತೊಲಗಿಸಲು 18,000 ಕೋಟಿ ರೂ.ಖರ್ಚು ಮಾಡಬೇಕು ಎಂದು ತಿಳಿಸಿದ್ದರು. ಆದರೆ, ಇದುವರೆಗೆ ಖರ್ಚು ಮಾಡಿದ್ದು ಕೇವಲ 12,000 ಕೋಟಿ ರೂ. ಮಾತ್ರ. 2002-03ರ ಅವಧಿಯಲ್ಲಿಯೇ ಖರ್ಚಿನ ವಿವರವನ್ನು 18 ಸಾವಿರಕ್ಕೆ ನಿಗದಿಪಡಿಸಿದರೆ ಪ್ರಸ್ತುತ 2025ರ ಈ ಹೊತ್ತಿನಲ್ಲಿ ಆಗುವ ಖರ್ಚಿಗೆ ಮೀಸಡಲಿಡಬೇಕಾದ ಅನುದಾನದ ಗಾತ್ರ ಬಹುದೊಡ್ಡದಾಗಲಿದೆ. ಹಾಗಾಗಿ ಪ್ರತಿ ಬಜೆಟ್ ನಲ್ಲಿ ಈ ಭಾಗಕ್ಕೆ ಕನಿಷ್ಟ 25,000 ಕೋಟಿ ರೂ. ಮೀಸಲಿಡುವ ಬಗ್ಗೆ ನಿರ್ಣಯವಾಗಬೇಕು ಎಂದು ನಿರಾಣಿ ಹನುಮಂತಪ್ಪ ಹೇಳಿದರು.

ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳ ಭಾಗದ ಸಾಮಾನ್ಯ ಜನರ ಭಾವನೆಗಳು ಕೆರಳುವ ಮೊದಲು ಈ ಭಾಗದ ಅಭಿವೃದ್ದಿಗೆ ಕ್ರಮವಹಿಸಿ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಕಾರ್ಯವಾಗಬೇಕು. ಅಪೂರ್ಣಗೊಂಡ ಈ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಪುನಾರಂಭಿಸಬೇಕು. 9 ಇಲಾಖೆಗಳನ್ನು ಈ ಭಾಗಕ್ಕೆ ಸ್ಥಳಾಂತರಿಸುವ ಕಾರ್ಯವಾಗಬೇಕು. ಅಭಿವೃದ್ಧಿ ಕೆಲಸಗಳಿಗೆ ಸದನ ನಿರ್ಣಯ ಮಾಡಬೇಕು. ಕೃಷಿಗೆ ಉತ್ತೇಜನ ನೀಡಬೇಕು. ಉ.ಕ. ಭಾಗದ ಎಲ್ಲ ಭೂಮಿಯನ್ನು ನೀರಾವರಿಗೊಳಪಡಿಸಬೇಕು. ಕೃಷ್ಣ ಮೇಲ್ದಂಡೆ ಯೋಜನೆಯಡಿ 173 ಪುನರ್ವಸತಿ ಕೇಂದ್ರಗಳಲ್ಲಿನ ಸಂತ್ರಸ್ಥರಿಗೆ ಸ್ಪಂದಿಸಬೇಕು. ಈ ಭಾಗದಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕು. ಕಾಳಿ ನದಿ ನೀರನ್ನು ಎತ್ತಿನ ಹೊಳೆ ಯೋಜನೆಯ ಮಾದರಿಯಲ್ಲಿ ನೀರೆತ್ತುವ ಕಾರ್ಯವಾಗಬೇಕು. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಆಗಬೇಕು. ವಿಜಯಪುರ ಮಹಿಳಾ ವಿವಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ನಿರಾಣಿ ಹನುಮಂತಪ್ಪ ಸಲಹೆ ಮಾಡಿದರು.

ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಅಕ್ಷರ, ಆರೋಗ್ಯ ಮತ್ತು ನೀರು ಇಲ್ಲದೇ ಇದ್ದರೆ ಅದನ್ನು ನಾಡು ಅನ್ನಲಾಗದು. ಈ ನಿಟ್ಟಿನಲ್ಲಿ ಯೋಚಿಸಿ, ಯೋಜಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಮತ್ತು ಪ್ರಗತಿಗೆ ಒತ್ತು ಕೊಡಬೇಕು. ಮುಖ್ಯವಾಗಿ ದುಡಿಯುವವರ ಕೈಗೆ ಉದ್ಯೋಗ ನೀಡುವ ಕಾರ್ಯವಾಗಬೇಕು. ಯಾವುದೇ ಯೋಜನೆಗಳನ್ನು ವಿವೇಚನೆ, ವಿವೇಕದಿಂದ ರೂಪಿಸಿ ಅನುಷ್ಠಾನಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.

ಮೇಲ್ಮನೆಯ ನೂತನ ಸದಸ್ಯ ಶಿವಕುಮಾರ ಮಾತನಾಡಿ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಹೆಚ್ಚುವರಿ ಜಾಹೀರಾತು ನಿಗದಿಪಡಿಸಿ ಪತ್ರಿಕೋದ್ಯಮಕ್ಕೆ ಬಲ ತುಂಬಬೇಕು ಎಂದು ಸಲಹೆ ಮಾಡಿದರು.

ಸದಸ್ಯ ಶಶಿಲ್ ಜಿ. ನಮೋಶಿ ಮಾತನಾಡಿ, ಈ ಭಾಗದಲ್ಲಿನ ಖಾಲಿ ಇರುವ ಎಲ್ಲ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿಶೇಷವಾಗಿ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಒತ್ತು ಕೊಡಬೇಕು ಎಂದು ಸಲಹೆ ಮಾಡಿದರು. ಪರಿಷತ್ತಿನ ಸಭಾ ನಾಯಕರಾದ ಎನ್.ಎಸ್.ಬೋಸರಾಜು, ಪರಿಷತ್ತಿನ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಇನ್ನಿತರರು ಚರ್ಚೆಯಲ್ಲಿ ಭಾಗಿಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News