×
Ad

ಕಾಲ್ತುಳಿತ ಪ್ರಕರಣ | ಆರ್‌ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ಸೇರಿ ನಾಲ್ವರಿಗೆ ಜೂ.19ರ ವರೆಗೆ ನ್ಯಾಯಾಂಗ ಬಂಧನ

Update: 2025-06-06 19:12 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಮಾರ್ಕೆಟಿಂಗ್ ವಿಭಾಗ ಮುಖ್ಯಸ್ಥ ನಿಖಿಲ್ ಸೋಸಲೆ ಸಹಿತ ಬಂಧಿತ ನಾಲ್ವರು ಆರೋಪಿಗಳಿಗೆ, ಜೂ.19ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ 41ನೇ ಎಸಿಜೆಎಂ ನ್ಯಾಯಾಲಯವು ಶುಕ್ರವಾರ ಆದೇಶ ನೀಡಿದೆ.

ಇಲ್ಲಿನ ಕಬ್ಬನ್‍ಪಾರ್ಕ್ ಠಾಣಾ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರ್‌ಸಿಬಿ ಮ್ಯಾನೇಜ್‍ಮೆಂಟ್ ಮಾರ್ಕೆಟಿಂಗ್ ವಿಭಾಗದ ನಿಖಿಲ್ ಸೋಸಲೆ, ಡಿಎನ್‍ಎ ಸಂಸ್ಥೆಯ ಸುನೀಲ್ ಮ್ಯಾಥ್ಯೂ, ಕಿರಣ್ ಹಾಗೂ ಸುಮಂತ್ ಎಂಬುವರನ್ನು ಬಂಧಿಸಿ ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ವಾದ, ಪ್ರತಿವಾದ ಆಲಿಸಿದ ಬಳಿಕ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಜೂ.19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ತೀರ್ಪು ನೀಡಿದರು. ವಿಕ್ಟರಿ ಪರೇಡ್ ಬಗ್ಗೆ ಆರ್‌ಸಿಬಿ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಲಾಗಿತ್ತು. ಇದನ್ನು ಆಧರಿಸಿ ಲಕ್ಷಾಂತರ ಅಭಿಮಾನಿಗಳು ಜಮಾವಣೆಗೊಂಡಿದ್ದರು.

ಈ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಬಂಧಿಸುವಂತೆ ಸೂಚನೆ ನೀಡುತ್ತಿದ್ದಂತೆ, ಮುಂಬೈಗೆ ಪರಾರಿಯಾಗಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದ್ದಾಗ ನಿಖಿಲ್ ಸೋಸಲೆಯನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಂಧಿಸಿದ್ದರು. ಅಲ್ಲದೆ, ಕ್ರೀಡಾಂಗಣದ ಭದ್ರತೆಯ ಹೊಣೆ ಹೊತ್ತಿದ್ದ ಡಿಎನ್‍ಎ ಸಂಸ್ಥೆಯ ಮೂವರನ್ನು ಬಂಧಿಸಲಾಗಿತ್ತು,

ಕೆಎಸ್‍ಸಿಎ ಅಧಿಕಾರಿಗಳ ಮನೆ ಮೇಲೆ ಸಿಸಿಬಿ ದಾಳಿ: ‘ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನುಮತಿ ಪಡೆಯದಿದ್ದರೂ ಆರ್‌ಸಿಬಿ ವಿಜಯೋತ್ಸವಕ್ಕೆ ಮುಂದಾಗಿದ್ದ ಕೆಎಸ್‍ಸಿಎ ಕಾರ್ಯದರ್ಶಿ ಶಂಕರ್ ಹಾಗೂ ಖಜಾಂಚಿ ಜಯರಾಮ್ ಅವರ ಮನೆ ಮೇಲೆ ಕಬ್ಬನ್‍ಪಾರ್ಕ್ ಠಾಣೆ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜೂ.5ರ ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ’ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News