×
Ad

ಕಾಲ್ತುಳಿತ ಪ್ರಕರಣ | ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ; ಬಿಜೆಪಿ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

Update: 2025-06-17 15:24 IST

ಬೆಂಗಳೂರು : ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆಗೆ  ಒತ್ತಾಯಿಸಿ, ನಗರದ ಫ್ರೀಡ್ಂ ಪಾರ್ಕ್​​ನಲ್ಲಿ ಇಂದು ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದ ಉಪಮುಖ್ಯಮಂತ್ರಿಯವರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾರ್ಯಕ್ರಮ ನಡೆಸಿದ್ದಾರೆ. ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿಗಳ ನಡುವಿನ ಪೈಪೋಟಿ, ಹುಚ್ಚಾಟದಿಂದ 11 ಜನ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಆಕ್ಷೇಪಿಸಿದರು.

ಇಂಥಹ ಭಂಡ ಸರಕಾರ, ಮುಖ್ಯಮಂತ್ರಿ- ಉಪಮುಖ್ಯಮಂತ್ರಿಗಳು ಜನಪ್ರಿಯತೆ ಕಳೆಕೊಂಡಿದ್ದಾರೆ. ರಾಜ್ಯ ಸರಕಾರದ ಪ್ರಾಯೋಜಕತ್ವದಲ್ಲಿ ಈ 11 ಜನರು ಸಾಯುವಂತಾಗಿದೆ. ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದರು. ಆದರೆ, ಫ್ರೀಡಂ ಪಾರ್ಕ್​​ನಲ್ಲೇ ಪೊಲೀಸರು, ಬಿಜೆಪಿ ನಾಯಕರನ್ನು ತಡೆದರು. ಈ ವೇಳೆ ನೂಕಾಟ ತಳ್ಳಾಟ ನಡೆಯಿತು. ನಂತರ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು, ಬಿಎಂಟಿಸಿ ಬಸ್​​ಗಳಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದರು.

ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ್, ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಸೇರಿದಂತೆ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಅಲ್ಲಿ ಬನ್ನಿ, ಇಲ್ಲಿ ಬನ್ನಿ ಎಂದು ಕರೆದಿದ್ದಾರೆ. ಹೀಗೆ ಕರೆದು 11 ಜನರ ಪ್ರಾಣ ತೆಗೆದಿದ್ದಾರೆ. ಕಪ್ ಆರ್.ಸಿ.ಬಿ.ಯದ್ದು, ಆದರೆ, ತಪ್ಪು ಸರಕಾರದ್ದು. ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿದ್ದಾರೆ. ಇಂಟೆಲಿಜೆನ್ಸ್ ಮುಖ್ಯಸ್ಥರಾದವರನ್ನು ಅಮಾನತು ಮಾಡಿಲ್ಲವೇಕೆ?

- ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ನಾಯಕ

ಎರಡು ಕಡೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಪೊಲೀಸ್ ಇಲಾಖೆಯು ಕಾರ್ಯಕ್ರಮ ಬೇಡವೆಂದು ತಿಳಿಸಿದ್ದರೂ ಮಾಡಿದ್ದಾರೆ. ವಿಧಾನಸೌಧದ ಬಳಿ ಕಾಂಗ್ರೆಸ್ ಕಾರ್ಯಕ್ರಮದಂತೆ ಪ್ರಚಾರದ ದೃಷ್ಟಿಯಿಂದ ಸನ್ಮಾನ ಮಾಡಿದ್ದಾರೆ. 11 ಸಾವಿನ ಕುರಿತು ಗೊತ್ತಿದ್ದರೂ ಕಾರ್ಯಕ್ರಮ ಮುಂದುವರೆಸಿದ್ದಾರೆ. ಇದು ಖಂಡನೀಯ.

- ಗೋಪಾಲಯ್ಯ, ಮಾಜಿ ಸಚಿವ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News