×
Ad

ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ : ಆರ್​​ಸಿಬಿ, ಕೆಎಸ್​​ಸಿಎ ವಿರುದ್ಧ ಎಫ್​ಐಆರ್

Update: 2025-06-05 19:59 IST

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಮೃತಪಟ್ಟ ಪ್ರಕರಣ ಸಂಬಂಧ ಇಲ್ಲಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಮೊದಲನೇ ಆರೋಪಿ ಆಗಿ ಆರ್‌ಸಿಬಿ ಮ್ಯಾನೇಜ್ಮೆಂಟ್ ಅನ್ನು ಉಲ್ಲೇಖಿಸಲಾಗಿದೆ.

ಪೊಲೀಸ್ ಇನ್‍ಸ್ಪೆಕ್ಟರ್ ಎ.ಕೆ.ಗಿರೀಶ್ ಎಂಬುವರ ದೂರನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತೆಯಡಿ ಸೆಕ್ಷನ್‍ಗಳಾದ 105, 115(2) ಹಾಗೂ 118(1)(2), 190, 132, 125ಎ, 125ಬಿ ಅಡಿಯಲ್ಲಿ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎ1 ಆರ್‌ಸಿಬಿ ಮ್ಯಾನೇಜ್‍ಮೆಂಟ್, ಎ2 ಡಿಎನ್‍ಎ ಇವೆಂಟ್ ಮ್ಯಾನೇಜ್‍ಮೆಂಟ್ ಆಗಿದ್ದರೆ ಕೆಎಸ್‍ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಆಸೋಸಿಯೇಷನ್)ಮೂರನೇ ಆರೋಪಿಯನ್ನಾಗಿ ಮಾಡಲಾಗಿದೆ.

ಪೊಲೀಸ್ ಇಲಾಖೆಯ ಯಾವುದೇ ಪೂರ್ವಾನುಮತಿ ಪಡೆಯದೇ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ಬಗ್ಗೆ ಮತ್ತು ವಿಕ್ಟರಿ ಪರೇಡ್ ನಡೆಸುವ ಬಗ್ಗೆ ಅಭಿಮಾನಿಗಳು ಸೇರಬೇಕೆಂದು ಪ್ರಕಟನೆ ನೀಡಲಾಗಿದ್ದು, ಇದು ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರವಾಗಿದೆ. ಈ ಮೂಲಕ ಲಕ್ಷಾಂತರ ಜನರು ಜಮಾವಣೆಯಾಗಲು ನೇರ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೆಎಸ್‍ಸಿಎ ಉನ್ನತ ಅಧಿಕಾರಿಗಳು ಜೂ.4ರಂದು ಸಂಜೆ ನಗರದಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಕೋರಿ ಕಬ್ಬನ್‍ಪಾರ್ಕ್ ಠಾಣೆಗೆ ಮನವಿ ನೀಡಿದ್ದರು. ಆದರೆ, ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳು ಸೇರುವ ಹಿನ್ನೆಲೆ ಸಾರ್ವಜನಿಕರಿಗೆ ಅಡಚಣೆಯುಂಟಾಗುವುದರಿಂದ ಸೂಕ್ತ ಬಂದೋಬಸ್ತ್‌ ಗೆ ಕಾಲಾವಕಾಶ ಬೇಕಾತ್ತದೆ ಎಂದು ಪೊಲೀಸರು ತಿಳಿಸಿದ ನಂತರವೂ ಇದಕ್ಕೆ ಒಪ್ಪದೆ ನಿಯಮ ಮೀರಿ ಕಾರ್ಯಕ್ರಮ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವಿಜಯೋತ್ಸವದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11 ಜನರು ಮೃತಪಟ್ಟರೆ 64 ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಹಲವು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೂ ಗಾಯಗಳಾಗಿವೆ. ಆದ್ದರಿಂದ ಈ ಎಲ್ಲದಲ್ಲೂ ಕಾರಣರಾಗಿರುವ ಆರ್‌ಸಿಬಿ ಮ್ಯಾನೇಜ್‍ಮೆಂಟ್, ಡಿಎನ್‍ಎ ಇವೆಂಟ್ ಮ್ಯಾನೇಜ್‍ಮೆಂಟ್ ಹಾಗೂ ಕೆಎಸ್‍ಸಿಎ ಉನ್ನತ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಈ ಮೊದಲು ಯುಡಿಆರ್ ದಾಖಲಿಸಲಾಗಿತ್ತು: ಈ ಮೊದಲು ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುಡಿಆರ್(ಅಸಹಜ ಸಾವಿನ ವರದಿ) ದಾಖಲಿಸಲಾಗಿತ್ತು. ಇದು ಹಲವು ಅನುಮಾನಗಳಿಗೆ ಕಾರಣವಾಗಿ ಸಾರ್ವಜನಿಕ ವಲಯ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೆ ಎಚ್ಚೆತ್ತ ಪೊಲೀಸರು ಗುರುವಾರ ಸಂಜೆಯ ನಂತರ ಎಫ್‍ಐಆರ್ ದಾಖಲಿಸಿದ್ದಾರೆ.

ಗೃಹ ಸಚಿವರ ಭೇಟಿ, ಪರಿಶೀಲನೆ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿದ ಸ್ಥಳಗಳಿಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಡಿಸಿಪಿಗಳಿಂದ ಮಾಹಿತಿ ಪಡೆದರು. ಬಳಿಕ ಕೆಎಸ್‍ಸಿಎ, ಆರ್‌ಸಿಬಿ ಹಾಗೂ ಬೆಂಗಳೂರು ನಗರ ಪೊಲೀಸರೊಂದಿಗೆ ಸುದೀರ್ಘ ಸಭೆ ನಡೆಸಿ, ಚರ್ಚಿಸಿದರು.

ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ ಅವರು, ಗೇಟ್ ನಂಬರ್ 6, 7, 2 ಮತ್ತು 2ಎ, 17, 18, 21, 16 ಇಷ್ಟು ಗೇಟ್‍ಗಳಲ್ಲಿ ಕಾಲ್ತುಳಿತ ಆಗಿದೆ. ಘಟನೆ ನಡೆದ ಸ್ಥಳದಲ್ಲಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇಲ್ಲ. ಆಸ್ಪತ್ರೆಗೆ ಕರೆದೊಯ್ಯುವಾಗ, ಚಿಕಿತ್ಸೆ ವೇಳೆ ಕೆಲವರು ಮೃತಪಟ್ಟಿದ್ದಾರೆ. ಹೀಗಾಗಿ ಯಾವ ಗೇಟ್‍ನಲ್ಲಿ ಎಷ್ಟು ಜನ ಸಾವನ್ನಪ್ಪಿದರು ಎಂಬ ಮಾಹಿತಿ ಇಲ್ಲ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News