ಫೆಬ್ರವರಿ 16ರಂದು ರಾಜ್ಯ ಬಜೆಟ್ ಮಂಡನೆ
Photo: PTI
ಬೆಂಗಳೂರು: 2024-25ನೆ ಆರ್ಥಿಕ ವರ್ಷದ ರಾಜ್ಯ ಬಜೆಟ್ ಅನ್ನು ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡನೆ ಮಾಡಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಫೆ.12ರಂದು ಭಾಷಣ ಮಾಡಲಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.16ರಂದು ರಾಜ್ಯ ಬಜೆಟ್ ಅನ್ನು ಮಂಡನೆ ಮಾಡಲಿದ್ದು, ಫೆ.23ರವರೆಗೆ ಅಧಿವೇಶನದ ನಡಾವಳಿಗಳು ಜರುಗಲಿವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಕರ್ನಾಟಕ ವಿದ್ಯುತ್ ನಿಗಮವು 2022-23ನೆ ಸಾಲಿನಲಿ 1630 ಕೋಟಿ ರೂ.ಮತ್ತು 2023-24ನೆ ಸಾಲಿನಲ್ಲಿ 2800 ಕೋಟಿ ರೂ.ಗಳು ಸೇರಿ ಒಟ್ಟು 4,430.00 ಕೋಟಿ ರೂ.ಗಳನ್ನು ಬ್ಯಾಂಕ್‍ಗಳು, ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲಕ್ಕೆ ಸರಕಾರದ ಖಾತರಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಗೃಹ ಜ್ಯೋತಿ: ಗೃಹ ಜ್ಯೋತಿ ಯೋಜನೆಯಡಿಯಲ್ಲಿ 48 ಯೂನಿಟ್‍ಗಳಿಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಹೆಚ್ಚುವರಿ ಶೇ.10ರಷ್ಟು ಯೂನಿಟ್ ಬದಲಿಗೆ ಹೆಚ್ಚುವರಿ 10 ಯೂನಿಟ್ ಅರ್ಹತಾ ಯೂನಿಟ್‍ಗಳನ್ನು ಒದಗಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ರಾಜ್ಯದಲ್ಲಿ 1.95 ಕೋಟಿ ಗೃಹ ಬಳಕೆ ಗ್ರಾಹಕರು ಸರಾಸರಿ 53 ಯೂನಿಟ್ ಬಳಕೆ ಮಾಡುತ್ತಿದ್ದಾರೆ. ಅದರಂತೆ ಅರ್ಹತಾ ಯೂನಿಟ್‍ಗಳು ಒಟ್ಟು 58 ಆಗಿರುತ್ತದೆ. 30 ಯೂನಿಟ್‍ಗಳನ್ನು ಬಳಸುವ ಬಡ ಕುಟುಂಬಗಳಿಗೆ ಅರ್ಹತಾ ಯೂನಿಟ್‍ಗಳು ಕೇವಲ 33 ಆಗಿರುತ್ತದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 69.73 ಲಕ್ಷ ಕುಟುಂಬಗಳು 48 ಯೂನಿಟ್‍ಗಿಂತ ಕಡಿಮೆ ಬಳಕೆ ಮಾಡುತ್ತಿದ್ದಾರೆ. 10 ಯೂನಿಟ್‍ಗಳ ಹೆಚ್ಚಳದಿಂದ ಸರಕಾರಕ್ಕೆ 33 ಕೋಟಿ ರೂ.ಗಳ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.
ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ 15.13 ಕೋಟಿ ರೂ.ವೆಚ್ಚದಲ್ಲಿ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶವನ್ನು ಇ-ಆಡಳಿತ ಇಲಾಖೆಯ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಹಯೋಗದೊಂದಿಗೆ ರಾಜ್ಯದಲ್ಲಿ ಅಭಿವೃದ್ದಿಪಡಿಸಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ಷೇರು ಬಂಡವಾಳವನ್ನು 600 ಕೋಟಿ ರೂ.ಗಳಿಂದ 1200 ಕೋಟಿ ರೂ.ಗಳಿಗೆ ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಉಡುಪಿ ನ್ಯಾಯಾಲಯ ಆವರಣದಲ್ಲಿ ವಕೀಲರ ಭವನ ಮತ್ತು ಎ.ಡಿ.ಆರ್ ಸಂಕೀರ್ಣವನ್ನೊಳಗೊಂಡ ಅನೆಕ್ಸ್ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಯ (ಪ್ರಥಮ ಹಂತ) 15.14 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಮರು ನಾಮಕರಣ: ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ‘ನಂದಿಹಾಳ ಪಿ.ಎಚ್’ ಗ್ರಾಮದ ಹೆಸರನ್ನು ‘ಆರೂಢ ನಂದಿಹಾಳ’, ಬೆಳಗಾವಿ ಜಿಲ್ಲೆಯ ‘ಕಿತ್ತೂರು ತಾಲೂಕು’ ಅನ್ನು ‘ಚನ್ನಮ್ಮನ ಕಿತ್ತೂರು ತಾಲೂಕು’ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಅಲ್ಲಮ ಪ್ರಭು ಉದ್ಯಾನವನ
ಶಿವಮೊಗ್ಗ ನಗರದ ಹಳೆ ಜೈಲು ಆವರಣದ ಸ.ನಂ.75 ರಲ್ಲಿನ 46 ಎಕರೆ 9 ಗುಂಟೆ ಮತ್ತು ಸ.ನಂ. 123 ರಲ್ಲಿನ 23 ಗುಂಟೆ ಒಟ್ಟು 46 ಎಕರೆ 32 ಗುಂಟೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿದ ಪ್ರದೇಶವನ್ನು ‘ಅಲ್ಲಮ ಪ್ರಭು ಉದ್ಯಾನವನ’ ಎಂದು ನಾಮಕರಣ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾಡ್ರ್ಸ್ ಆಧುನೀಕರಣ ಕಾರ್ಯಕ್ರಮದಡಿ ಒಟ್ಟು 3455 ಕಂಪ್ಯೂಟರ್, ಸ್ಕ್ಯಾನರ್, ರೋವರ್ ಮತ್ತು ಪ್ರೀಂಟರ್ ಗಳನ್ನು 31 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಟೆಂಡರ್ ಮೂಲಕ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದ ಪರಿಷ್ಕೃತ ಅಂದಾಜು ಮೊತ್ತ 17.40 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯು ಬೆಂಗಳೂರಿನ ಹಲಸೂರು ಕೆರೆಯ ಬಳಿ ಕೆನ್ಸಿಂಗ್ ಟನ್ ರಸ್ತೆಯಲ್ಲಿ ‘ಪ್ರವಾಸಿ ಸೌಧ’ ಕಟ್ಟಡವನ್ನು 18 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿ, ಪ್ರವಾಸೋದ್ಯಮ ಇಲಾಖೆಯು ನ.29ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕೊಡಗು ಜಿಲ್ಲೆಯ ತಾಲೂಕು ಕೇಂದ್ರವಾಗಿರುವ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯೊಂದಿಗೆ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾಗಶಃ ಮುಗುಟಗೇರಿ ಗ್ರಾಮವನ್ನೊಳಗೊಂಡ ಪ್ರದೇಶವನ್ನು ‘ಪರಿವರ್ತಿತ ಪ್ರದೇಶ’ ಎಂದು ಹಾಗೂ ಪೊನ್ನಂಪೇಟೆ ‘ಪಟ್ಟಣ ಪಂಚಾಯಿತಿ’ ಪ್ರದೇಶವೆಂದು ಉದ್ಘೋಷಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.