×
Ad

ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ| ಅಭಿಮಾನಿಗಳ ಸಾವಿಗೆ ರಾಜ್ಯ ಸರಕಾರವೇ ಹೊಣೆ : ಆರ್‌. ಅಶೋಕ್‌

Update: 2025-06-04 19:39 IST

ಆರ್‌. ಅಶೋಕ್‌

ಬೆಂಗಳೂರು: ಐಪಿಎಲ್ ಚಾಂಪಿಯನ್ ಆರ್ ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿ ಸಂಭ್ರಮಿಸಬೇಕಾದ ಘಳಿಗೆಯನ್ನು ಸೂತಕದ ಘಳಿಗೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿವೇಚನಾರಹಿತ ದುರಾಡಳಿತ ಇವತ್ತು ಅಮಾಯಕ ಜೀವಗಳನ್ನ ಬಲಿ ತೆಗೆದುಕೊಂಡಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಕನ್ನಡಿಗರ ಜನಪ್ರಿಯ ಆರ್ ಸಿಬಿ ತಂಡ ಚಾಂಪಿಯನ್ ಪಟ್ಟ ಗೆದ್ದ ಸಾಧನೆಯಲ್ಲಿ ತಾನೂ ಒಂದಷ್ಟು ಕ್ರೆಡಿಟ್ ಪಡೆಯಬೇಕು ಎನ್ನುವ ಆತುರದಲ್ಲಿ ಸರಿಯಾದ ಪೂರ್ವಸಿದ್ಧತೆ ಇಲ್ಲದೆ, ಯೋಜನೆ ಇಲ್ಲದೆ, ಪೊಲೀಸರಿಗೆ ಕಾಲಾವಕಾಶ ಕೊಡದೆ, ಅಭಿನಂದನಾ ಸಮಾರಂಭ ನಡೆಸಲು ರಾಜ್ಯ ಸರ್ಕಾರ ದುಂಬಾಲು ಬಿದ್ದಿದ್ದೆ ಈ ಅನಾಹುತಕ್ಕೆ ಕಾರಣ ಎಂದು ಅವರು ಆರೋಪಿದ್ದಾರೆ.

ಐಪಿಎಲ್ ಪಂದ್ಯಾವಳಿಯ ಫೈನಲ್ ಮ್ಯಾಚ್ ನಿನ್ನೆ ರಾತ್ರಿಯಷ್ಟೇ ಮುಗಿದಿದೆ. ನಿನ್ನೆ ರಾತ್ರಿಯೆಲ್ಲಾ ನಗರದಾದ್ಯಂತ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವಲ್ಲಿ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಗೆ ಇವತ್ತು ಬೆಳಿಗ್ಗೆ ಏಕಾಏಕಿ ಮತ್ತೊಮ್ಮೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿ ಎಂದರೆ ಅದು ಕಷ್ಟಸಾಧ್ಯ ಎನ್ನುವ ಕನಿಷ್ಠ ಪರಿಜ್ಞಾನವೂ ಇಲ್ಲದಿದ್ದಿದ್ದು ಸರ್ಕಾರದ ಸ್ಪಷ್ಟ ವೈಫಲ್ಯ ಮತ್ತು ಅದಕ್ಕಿಂತ ಹೆಚ್ಚಾಗಿ ಬೇಜವಾಬ್ದಾರಿತನ ಎಂದು ಟೀಕಿಸಿದ್ದಾರೆ.

ಚಾಂಪಿಯನ್ ಆರ್ ಸಿಬಿ ತಂಡವನ್ನ ಸ್ವಾಗತಿಸಲು, ತಮ್ಮ ನೆಚ್ಚಿನ ಆಟಗಾರರನ್ನು ನೋಡಲು, ಅವರ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ ಎನ್ನುವುದನ್ನ ಅಂದಾಜಿಸುವಲ್ಲಿ ಸರ್ಕಾರ ಎಡವಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಜನ ಸಂದಣಿ ನಿರೀಕ್ಷಿಸಿ ಹೆಚ್ಚಿನ ಕಾಲಾವಕಾಶ ತೆಗೆದುಕೊಂಡು ವಾರಾಂತ್ಯದಲ್ಲಿ ಈ ಕಾರ್ಯಕ್ರಮ ಮಾಡಬಹುದಿತ್ತು ಎನ್ನಿಸುತ್ತಿದೆ ಎಂದಿದ್ದಾರೆ.

ಈ ಸಾವುಗಳಿಗೆ ರಾಜ್ಯ ಸರ್ಕಾರವೇ ಹೊಣೆ ಹೊತ್ತು ಮೃತರ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಬೇಕು. ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು. ಮೃತ ದುರ್ದೈವಿಗಳ ಕುಟುಂಬಗಳ ದುಃಖದಲ್ಲಿ ಇಡೀ ರಾಜ್ಯವೇ ಭಾಗಿಯಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News