ಶಾಲಾ ಆವರಣದಲ್ಲಿ ಬೀದಿ ನಾಯಿಗಳ ಉಪಟಳ ತಡೆ; ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರಾಜ್ಯ ಸರಕಾರವು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಬೀದಿ ನಾಯಿಗಳ ಉಪಟಳವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಎಲ್ಲ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ನಾಯಿಗಳ ಸಂಖ್ಯೆ ಒಳಗೊಂಡ ಮಾಹಿತಿಯನ್ನು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು ಎಂದು ತಿಳಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಸುತ್ತೋಲೆಯನ್ನು ಹೊರಡಿಸಿದ್ದು, ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರುತಿಸಿದ ನಾಯಿಗಳನ್ನು ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ನಾಯಿ ಆಶ್ರಯ ತಾಣಗಳಿಗೆ ಸಾಗಿಸಬೇಕು. ಒಮ್ಮೆ ನಾಯಿಗಳನ್ನು ಶಿಕ್ಷಣ ಸಂಸ್ಥೆಯ ಆವರಣದಿಂದ ಸ್ಥಳಾಂತರಿಸಿದ ನಂತರ ಬೀದಿ ನಾಯಿಗಳು ಶಾಲಾ ಆವರಣದೊಳಗೆ ಪ್ರವೇಶಿಸದಂತೆ ತಡೆಯಲು ಸಂಸ್ಥೆಯ ಆವರಣಕ್ಕೆ ಕಾಂಪೌಂಡ್/ಬೇಲಿಯನ್ನು ನಿರ್ಮಿಸಬೇಕು ಎಂದಿದ್ದಾರೆ.
ಈ ಕುರಿತಾಗಿ ಮೇಲುಸ್ತುವಾರಿ ಮಾಡಲು ಹಾಗೂ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯತೆ ಸಾಧಿಸಲು ಆಯಾ ಶಾಲೆಯ ಮುಖ್ಯಶಿಕ್ಷಕರು ಹಿರಿಯ ಸಹಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಆಯಾ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿಗಳು ಶಾಲಾ ಆವರಣದಲ್ಲಿ ಬೀದಿ ನಾಯಿಗಳ ಉಪಟಳ ತಡೆಗಟ್ಟಲು ಸೂಕ್ತ ಕ್ರಮವಹಿಸಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಶಾಲಾ-ಕಾಲೇಜುಗಳಲ್ಲಿ ಅನುಷ್ಠಾನ ಆಗುತ್ತಿರುವುದನ್ನು ಪ್ರತಿ 15 ದಿನಗಳಿಗೊಮ್ಮೆ ಶಾಲಾ-ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಿ, ಅನುಪಾಲನೆ ಮಾಡಬೇಕು ಎಂದು ಅವರು ಹೇಳಿದ್ದಾರೆ.