×
Ad

ಮಂಡ್ಯ ಕ್ಷೇತ್ರದ ಟಿಕೆಟ್‍ಗಾಗಿ ಸುಮಲತಾ ಲಾಬಿ

Update: 2024-02-09 20:20 IST

Photo:X/@sumalathaA

ಬೆಂಗಳೂರು: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿಯಲು ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಹೊಸದಿಲ್ಲಿಯಲ್ಲಿ ತೀವ್ರ ಲಾಬಿ ನಡೆಸಿದ್ದು, ಬಿಜೆಪಿಯಿಂದ ಸ್ಪರ್ಧಿಸಲು ತಮಗೆ ಅವಕಾಶ ಕಲ್ಪಿಸಬೇಕೆಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದು ಭೇಟಿ ಮಾಡಿ, ‘ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಬಿಟ್ಟುಕೊಡಬಾರದು. ಬಿಜೆಪಿಯಿಂದ ಸ್ಪರ್ಧಿಸಲು ತಮಗೆ ಅವಕಾಶ ಕಲ್ಪಿಸಬೇಕುʼ ಎಂದು ಕೋರಿದ್ದಾರೆಂದು ಗೊತ್ತಾಗಿದೆ.

ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿದ್ದ ಸುಮಲತಾ, ಇಂದು ಸ್ವತಃ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ, ಹಾಸನ, ತುಮಕೂರು, ಕೋಲಾರ ಕ್ಷೇತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ. ಅಲ್ಲದೆ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಯಾರು ಕಣಕ್ಕಿಳಿಯುತ್ತಾರೆಂಬ ಕುತೂಹಲ ಸೃಷ್ಟಿಸಿದೆ. ಈ ಮಧ್ಯೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಮಾತುಗಳು ಕೇಳಿಬರುತ್ತಿದೆ.

ಬಿಜೆಪಿಗೆ ಬಾಹ್ಯ ಬೆಂಬಲ ಘೋಷಿಸಿರುವ ಸಂಸದೆ ಸುಮಲತಾ ಈ ಬಾರಿ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ. ಈ ಬೆಳವಣಿಗೆಗಳ ನಡುವೆಯೇ ಹಾಲಿ ಸಂಸದೆ ಸುಮಲತಾ, ಬಿಜೆಪಿ ವರಿಷ್ಟರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News