×
Ad

ಪ್ರತಿ ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಕ್ಯಾನ್ಸರ್‌ ಆಸ್ಪತ್ರೆ : ಶರಣಪ್ರಕಾಶ್‌ ಪಾಟೀಲ್‌

Update: 2025-06-25 19:32 IST

ಡಾ.ಶರಣಪ್ರಕಾಶ್ ಪಾಟೀಲ್

ಬೆಂಗಳೂರು : ರಾಜ್ಯದಲ್ಲಿ ಆರೋಗ್ಯಭಾಗ್ಯವನ್ನು ಹೆಚ್ಚಿಸಲು ಸಂಕಲ್ಪ ತೊಟ್ಟಿರುವ ನಮ್ಮ ಸರಕಾರ ಮುಂದಿನ 3 ವರ್ಷದೊಳಗೆ ಪ್ರತಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ, ಹೃದ್ರೋಗ ಚಿಕಿತ್ಸಾ ಆಸ್ಪತ್ರೆಯನ್ನು ನಿರ್ಮಾಣ ಮಾಡಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಘೋಷಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.

ಕರ್ನಾಟಕವನ್ನು ಆರೋಗ್ಯಕರ ರಾಜ್ಯವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಗುರಿ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ನಮ್ಮ ವೈದ್ಯಕೀಯ ಶಿಕ್ಷಣ ಇಲಾಖೆ ಮೂರು ವರ್ಷಗಳ ಅಭಿವೃದ್ಧಿ ಯೋಜನೆಗಳ ನೀಲನಕ್ಷೆಯನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಎಲ್ಲರಿಗೂ, ಸುಲಭ ಹಾಗೂ ಸುಲಲಿತವಾಗಿ ಚಿಕಿತ್ಸೆ ದೊರೆಯುವಂತೆ ಮಾಡಲಾಗುವುದು. ನಾಗರಿಕರ ಯೋಗ ಕ್ಷೇಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದು ಡಾ.ಪಾಟೀಲ್‌ ಹೇಳಿದರು.

ಜಯದೇವ ಹೃದ್ರೋಗ ಆಸ್ಪತ್ರೆ ಶಾಖೆಯನ್ನು ಹುಬ್ಬಳ್ಳಿ ಮತ್ತು ಬೆಳಗಾವಿ ಭಾಗದಲ್ಲಿ ಆರಂಭಿಸಲಾಗುವುದು. ಅತೀ ಶೀಘ್ರದಲ್ಲೇ ಇದು ಲೋಕಾರ್ಪಣೆ ಆಗಲಿದೆ ಎಂದರು.

ಸೀಟ್‌ ಬ್ಲಾಕಿಂಗ್‌ ಇಲ್ಲ :

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 100% ಪಾರದರ್ಶಕತೆ ಇದೆ. ಯಾವುದೇ ಸೀಟ್ ಬ್ಲಾಕಿಂಗ್ ನಮ್ಮಲ್ಲಿ ಇಲ್ಲ. ಮೆರಿಟ್ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ (ಕೆಇಎ) ಮೆಡಿಕಲ್ ಸೀಟು ಹಂಚಿಕೆ ಮಾಡಲಾಗುತ್ತದೆ. 800 ಮೆಡಿಕಲ್ ಸೀಟು ಹೆಚ್ಚಳಕ್ಕೆ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಲಾಖೆ ವತಿಯಿಂದ ಅನೇಕ ಯೋಜನೆ :

ನಮ್ಮ‌ ಇಲಾಖೆ ವತಿಯಿಂದ ಕಾರ್ಯಕರ್ತರ ಅಹವಾಲು ಸ್ವೀಕರಿಸಲಾಗಿದೆ. ಎಲ್ಲೆಲ್ಲಿ ಆಸ್ಪತ್ರೆಗಳನ್ನು ಸುಧಾರಣೆ ಮಾಡಬೇಕು ಎಂದು ಸಲಹೆ ಕೊಟ್ಟಿದ್ದಾರೆ. ನಮ್ಮ ಇಲಾಖೆಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ತಂದಿದ್ದೇವೆ ಎಂದು ಸಚಿವರು ವಿವರಿಸಿದರು.

ಜಯದೇವ ಆಸ್ಪತ್ರೆಯನ್ನು ಕಲಬುರಗಿಯಲ್ಲಿ ಉದ್ಘಾಟನೆ ಮಾಡಿದ್ದೇವೆ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಇದೆ. ಹುಬ್ಬಳ್ಳಿಯಲ್ಲಿ ಮುಂದಿನ ವರ್ಷ 400 ಹಾಸಿಗೆಗಳ ಜಯದೇವ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದೇವೆ. ಈ ಈಗಾಗಲೇ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ವಿವರಿಸಿದರು.

2 ಲಕ್ಷದ 86 ಸಾವಿರ ಯುವಕರು ಯುವ ನಿಧಿ ಯೋಜನೆಯಲ್ಲಿ ನೋಂದಣಿ ಆಗಿದ್ದಾರೆ. ಈ ಯೋಜನೆಯನ್ನು ಇನ್ನಷ್ಟು ಸಮರ್ಪಕವಾಗಿ ಜಾರಿಗೆ ತರಲು ಕೆಲವು ಸುಧಾರಣೆಗಳನ್ನು ತರುತ್ತಿದ್ದೇವೆ ಎಂದು ಡಾ.ಶರಣಪ್ರಕಾಶ್‌ ಪಾಟೀಲ್‌ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News