×
Ad

‘ಮಾವು ಬೆಳೆಗೆ ಬೆಂಬಲ ಬೆಲೆ’ ನಾಳಿನ ಸಂಪುಟದಲ್ಲಿ ನಿರ್ಧಾರ : ಬಿ.ಎಸ್.ಸುರೇಶ್

Update: 2025-06-18 20:47 IST

ಬಿ.ಎಸ್.ಸುರೇಶ್

ಬೆಂಗಳೂರು: ಮಾವು ಬೆಳೆಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಗುರುವಾರ(ಜೂ.19) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವನ್ನು ಬೆಳೆಯುತ್ತಾರೆ. ಈ ಬಾರಿ ಮಾವು ಬೆಲೆ ತೀವ್ರ ಕುಸಿತ ಉಂಟಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಈ ರೈತರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅದರಲ್ಲೂ ಕೋಲಾರದಲ್ಲಿ ಬೆಳೆಯುತ್ತಿರುವ ತೋತಾಪುರಿ ಸೇರಿದಂತೆ ಇತರೆ ಮಾವು ಬೆಳೆ ಪ್ರವೇಶವನ್ನು ಆಂಧ್ರಪ್ರದೇಶ ಸರಕಾರ ನಿರ್ಬಂಧಿಸಿರುವುದರಿಂದ ರೈತರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಈ ನಿರ್ಬಂಧವನ್ನು ತೆರವುಗೊಳಿಸುವಂತೆ ನಮ್ಮ ಮುಖ್ಯಮಂತ್ರಿ, ಆಂಧ್ರಪ್ರದೇಶ ಮುಖ್ಯಮಂತ್ರಿಗಳಿಗೆ ಎರಡು ಬಾರಿ ಪತ್ರ ಬರೆದು ಮನವಿ ಮಾಡಿದ್ದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸುರೇಶ್ ಕಿಡಿಕಾರಿದರು.

ನಮ್ಮಿಂದಲೂ ನಿರ್ಬಂಧ?: ಆಂಧ್ರಂಪ್ರದೇಶ ಸರಕಾರ ರಾಜ್ಯದ ಮಾವು ಬೆಳೆಗೆ ನಿರ್ಬಂಧ ಹೇರುವ ಮೂಲಕ ನಮ್ಮ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಇದು ಅಮಾನವೀಯ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೊಡು ಕೊಳ್ಳುವಿಕೆ ಇರಬೇಕು. ಆದರೆ, ಆಂಧ್ರಪ್ರದೇಶ ನಮ್ಮ ಬೆಳೆಗೆ ನಿರ್ಬಂಧ ಹೇರಿರುವುದರಿಂದ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯವೂ ಆ ರಾಜ್ಯದ ಬೆಳೆಗಳ ಪ್ರವೇಶಕ್ಕೆ ನಿರ್ಬಂಧಿಸುವ ಕುರಿತು ಗಂಭೀರ ಚಿಂತನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಕೋಲಾರದ ಮಾವು ಬೆಳೆಗಾರರೊಂದಿಗೆ ಸಭೆ ನಡೆಸಿ ಅವರ ಸಂಕಷ್ಟಗಳನ್ನು ಆಲಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ಬೆಳೆಗಾರರ ನೆರವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬೆಳೆಗಾರರನ್ನು ಬೆಲೆ ಕುಸಿತದಿಂದ ಪಾರು ಮಾಡುವ ಉದ್ದೇಶದಿಂದ ಮಾವು ಬೆಳೆಗೆ ಬೆಂಬಲ ಬೆಲೆ ನೀಡಲು ನಿರ್ಧರಿಸಲಾಗಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸುರೇಶ್ ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News