×
Ad

ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಅಯೋಗ್ಯ’ ಎಂದ ಸೂಲಿಬೆಲೆ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಸುಪ್ರೀಂಕೋರ್ಟ್

Update: 2025-07-25 14:59 IST

ಮಲ್ಲಿಕಾರ್ಜುನ ಖರ್ಗೆ / ಚಕ್ರವರ್ತಿ ಸೂಲಿಬೆಲೆ

ಹೊಸದಿಲ್ಲಿ: ಸಾರ್ವಜನಿಕ ಭಾಷಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಅಯೋಗ್ಯ’ ಎಂದು ಕರೆದಿದ್ದಕ್ಕಾಗಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಳೆದ ವರ್ಷ ಕರ್ನಾಟಕ ಪೋಲಿಸರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು ಈ ತೀರ್ಪನ್ನು ಹೊರಡಿಸಿತು.

ಸೂಲಿಬೆಲೆ 2024, ಜನವರಿಯಲ್ಲಿ ರಾಯಚೂರಿನಲ್ಲಿ ಮಾಡಿದ್ದ ಸಾರ್ವಜನಿಕ ಭಾಷಣದಲ್ಲಿ ಖರ್ಗೆಯವರನ್ನು ‘ಅಯೋಗ್ಯ’ ಎಂದು ಬಣ್ಣಿಸಿದ್ದರು.

ಖರ್ಗೆಯವರ ಜಾತಿಯ ವಿರುದ್ಧ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸಲು ಸೂಲಿಬೆಲೆ ಈ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ಕಲಬುರಗಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ ಅವರು ಕ್ರಿಮಿನಲ್ ದೂರನ್ನು ಸಲ್ಲಿಸಿದ್ದು, ಪೋಲಿಸರು ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ವಿವಿಧ ಕಲಮ್‌ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಇದನ್ನು ಪ್ರಶ್ನಿಸಿ ಸೂಲಿಬೆಲೆ ಕರ್ನಾಟಕ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. 2024,ಅಕ್ಟೋಬರ್‌ನಲ್ಲಿ ಉಚ್ಚ ನ್ಯಾಯಾಲಯವು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಆರೋಪಗಳನ್ನು ರದ್ದುಗೊಳಿಸಿತಾದರೂ ಐಪಿಸಿಯಡಿ ಆರೋಪಗಳ ಕುರಿತು ತನಿಖೆಯನ್ನು ಮುಂದುವರಿಸಲು ಅವಕಾಶವನ್ನು ನೀಡಿತ್ತು.

ಇದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದ ಸೂಲಿಬೆಲೆ,ಉಚ್ಚ ನ್ಯಾಯಾಲಯವು ‘ಅಯೋಗ್ಯ’ ಪದವನ್ನು ‘ರ‍್ಯಾಸ್ಕಲ್’ ಎಂದು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ವಾದಿಸಿದ್ದರು.

‘ಅಯೋಗ್ಯ’ ಪದವು ಹಲವಾರು ಸಮಾನ ಅರ್ಥಗಳನ್ನು ಹೊಂದಿದ್ದು, ‘ನಿಷ್ಪ್ರಯೋಜಕ’ ಎನ್ನುವುದು ಅತ್ಯಂತ ನಿಕಟವಾದ ಅರ್ಥವಾಗಿದೆ ಎಂದು ವಾದಿಸಿದ್ದ ಅವರು, ಉಚ್ಚ ನ್ಯಾಯಾಲಯವು ಪ್ರಕರಣದಲ್ಲಿ ಈ ಪದವನ್ನು ಸರಿಯಾಗಿ ವ್ಯಾಖ್ಯಾನಿಸಿಲ್ಲ ಎಂದು ಹೇಳಿದ್ದರು.

ಸೂಲಿಬೆಲೆ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News