ಮಾಲೂರು ಶಾಸಕ ನಂಜೇಗೌಡರ ಆಯ್ಕೆ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ
ಮರು ಮತ ಎಣಿಕೆ ನಡೆಸಿ ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶವನ್ನು ನೀಡಲು ಸೂಚನೆ
ಶಾಸಕ ಕೆ.ವೈ. ನಂಜೇಗೌಡ
ಹೊಸದಿಲ್ಲಿ: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಅವರ 2023ರ ಚುನಾವಣೆಯಲ್ಲಿನ ಆಯ್ಕೆಯನ್ನು ಅಮಾನ್ಯಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಈ ಸಂಬಂಧ ಆದೇಶ ಹೊರಡಿಸಿದ್ದು, ಮರು ಎಣಿಕೆ ಮಾಡುವಂತೆ ಹೇಳಿದ್ದ ಹೈಕೋರ್ಟ್ ನಿರ್ದೇಶನಗಳನ್ನು ಪಾಲಿಸಲು ಮತ್ತು ಅದರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಚುನಾವಣಾ ಆಯೋಗಕ್ಕೆ (ಇಸಿಐ) ಸೂಚಿಸಿದೆ.
ನ್ಯಾಯಾಲಯದ ಪೂರ್ವಾನುಮತಿ ಪಡೆಯದೇ ಮರು ಎಣಿಕೆಯ ಫಲಿತಾಂಶವನ್ನು ಪ್ರಕಟಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ.
ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಮಾಲೂರು ಕ್ಷೇತ್ರದ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ಮಾಡಿ ಕಾಂಗ್ರೆಸ್ ಶಾಸಕ ನಂಜೇಗೌಡ ಅವರ ಆಯ್ಕೆ ರದ್ದುಗೊಳಿಸಿ, ಮರು ಎಣಿಕೆ ನಡೆಸುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ನಂಜೇಗೌಡ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.