×
Ad

ಕಾಂಗ್ರೆಸ್ ಶಾಸಕರೊಂದಿಗೆ ಸುರ್ಜೇವಾಲ ಸಭೆ | ಸಚಿವರ ಕಾರ್ಯವೈಖರಿ, ಕ್ಷೇತ್ರದಲ್ಲಿನ ಸಾಧನೆ, ಗ್ಯಾರಂಟಿಗಳ ಅನುಷ್ಠಾನ ಕುರಿತು ಚರ್ಚೆ

Update: 2025-07-07 20:48 IST

ರಣದೀಪ್ ಸುರ್ಜೇವಾಲ (PTI)

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಚಿವರ ಕಾರ್ಯವೈಖರಿ, ಕ್ಷೇತ್ರಗಳಲ್ಲಿ ಶಾಸಕರು ಮಾಡಿರುವ ಸಾಧನೆ, ಪಕ್ಷ ಸಂಘಟನೆ ಹಾಗೂ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಪ್ರತಿಯೊಬ್ಬ ಶಾಸಕರ ಜೊತೆ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರತ್ಯೇಕವಾಗಿ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈಗಾಗಲೇ, ಬೆಂಗಳೂರು, ಬೆಂಗಳೂರು ಉತ್ತರ(ಗ್ರಾಮಾಂತರ), ಬೆಂಗಳೂರು ದಕ್ಷಿಣ(ರಾಮನಗರ), ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಶಾಸಕರೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದ ಸುರ್ಜೇವಾಲ, ಸೋಮವಾರದಿಂದ ಮೂರು ದಿನಗಳ ಕಾಲ ಕಲಬುರಗಿ, ಶಿವಮೊಗ್ಗ, ಬೆಳಗಾವಿ, ರಾಯಚೂರು, ಯಾದಗಿರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡ, ತುಮಕೂರು, ಹುಬ್ಬಳ್ಳಿ ಧಾರವಾಡ ಜಿಲ್ಲೆಯ 60ಕ್ಕೂ ಹೆಚ್ಚು ಶಾಸಕರ ಜೊತೆ ಸಭೆ ನಡೆಸಲು ಪ್ರತ್ಯೇಕವಾಗಿ ವೇಳಾಪಟ್ಟಿಯನ್ನು ನೀಡಿದ್ದಾರೆ.

ಪ್ರತಿಯೊಬ್ಬ ಶಾಸಕರಿಂದಲೂ ಪ್ರತ್ಯೇಕವಾಗಿ ಮಾಹಿತಿಗಳನ್ನು ಸಂಗ್ರಹಿಸುತ್ತಿರುವ ಸುರ್ಜೇವಾಲ, ಪಕ್ಷ ಸಂಘಟನೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಪ್ರಮುಖವಾಗಿ ಕೆಲವು ಸಚಿವರ ಕಾರ್ಯವೈಖರಿ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಗ್ಯಾರಂಟಿಗಳ ಜೊತೆ ಕ್ಷೇತ್ರಗಳಗೆ ಅಭಿವೃದ್ಧಿ ಯೋಜನೆಗಳು, ಕಾಮಗಾರಿಗಳಿಗೂ ಅನುದಾನ ಬಿಡುಗಡೆ ಮಾಡುವ ಅಗತ್ಯವನ್ನು ಶಾಸಕರು ಸುರ್ಜೇವಾಲಗೆ ಮನದಟ್ಟು ಮಾಡಿದ್ದಾರೆ. ಕೇವಲ ಗ್ಯಾರಂಟಿಗಳಿಂದಲೇ ಮತದಾರರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಅವರ ಕಣ್ಣಿಗೆ ಕಾಣುವಂತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿರಬೇಕು. ಇಲ್ಲದಿದ್ದರೆ, ವಿಪಕ್ಷಗಳಿಗೆ ಹಾಗೂ ಮತದಾರರಿಗೆ ಉತ್ತರಿಸಲು ಕಷ್ಟವಾಗುತ್ತದೆ ಎಂದು ಶಾಸಕರು ಅಳಲು ತೋಡಿಕೊಂಡಿದ್ದಾರೆ.

ಮೂರು ದಿನಗಳ ಕಾಲ ಶಾಸಕರ ಜೊತೆ ಸಭೆ ನಡೆಸಲಿರುವ ಸುರ್ಜೇವಾಲ, ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು, ಆನಂತರ ಮುಂದಿನ ಹಂತದ ಸಭೆಯಲ್ಲಿ ಸಚಿವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬಳಿ ಚರ್ಚೆ ಮಾಡುವಾಗ ಶಾಸಕರ ಅಭಿಪ್ರಾಯಗಳನ್ನು ಅವರ ಮುಂದಿಡಲಿದ್ದಾರೆ.

ಎಲ್ಲ ಶಾಸಕರು, ಸಚಿವರು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜೊತೆ ಸಭೆ ನಡೆಸಿದ ಬಳಿಕ ಸಮಗ್ರವಾದ ವರದಿಯನ್ನು ಸಿದ್ಧಗೊಳಿಸಿ, ಕಾಂಗ್ರೆಸ್ ಹೈಕಮಾಂಡ್‍ಗೆ ಸುರ್ಜೇವಾಲ ಸಲ್ಲಿಕೆ ಮಾಡಲಿದ್ದಾರೆ. ಆ ವರದಿಯಲ್ಲಿ ಶಾಸಕರು, ಸಚಿವರ ಕಾರ್ಯವೈಖರಿ, ಸಾಧನೆಗಳು, ಪಕ್ಷ ಸಂಘಟನೆಯ ವಿಚಾರಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಹೇಗಿದೆ ಎಂಬ ವಿವರಗಳನ್ನು ಸಲ್ಲಿಸಲಿದ್ದಾರೆ.

‘ಪಕ್ಷ ಸಂಘಟನೆ, ಮುಂಬರುವ ಎಲ್ಲ ಸ್ಥಳೀಯ ಮತ್ತು ಪಂಚಾಯತ್ ಚುನಾವಣೆ ಹಾಗೂ ಮೂರು ವರ್ಷಗಳ ನಂತರ ಎದುರಾಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಣದೀಪ್ ಸಿಂಗ್ ಸುಜೇವಾಲ ಅವರೊಂದಿಗೆ ಚರ್ಚೆ ನಡೆಯಿತು. ಕ್ಷೇತ್ರಕ್ಕೆ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನದ ಕುರಿತು ಅವರು ಕೇಳಿದಂತಹ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನಮ್ಮ ಮನಸ್ಸಿನ ಅಭಿಪ್ರಾಯಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜೊತೆ ನಮ್ಮ ಸಂಬಂಧ ಚೆನ್ನಾಗಿದೆ. ಅದೇ ರೀತಿ ಸಚಿವರ ಜೊತೆಯೂ ಉತ್ತಮ ಒಡನಾಟವಿದೆ. ನಮ್ಮ ಕರೆಗಳಿಗೆ, ಮನವಿಗಳಿಗೆ ಅವರು ಸ್ಪಂದಿಸುತ್ತಿದ್ದಾರೆ’

-ಲಕ್ಷ್ಮಣ ಸವದಿ, ಕಾಂಗ್ರೆಸ್ ಶಾಸಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News