×
Ad

ಕನ್ನಡ ವಿರೋಧಿ ಸಿಂಧಿ ಪ್ರೌಢಶಾಲೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ರಾಜ್ಯ ಸರಕಾರಕ್ಕೆ ಡಾ.ಬಿಳಿಮಲೆ ಪತ್ರ

Update: 2025-09-16 23:40 IST

ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ನಗರದ ಕುಮಾರ ಪಾರ್ಕ್‍ನಲ್ಲಿರುವ ಸಿಂಧಿ ಪ್ರೌಢಶಾಲೆಯಲ್ಲಿ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸುವ ಆಘಾತಕಾರಿ ಕ್ರಮವನ್ನು ಅನುಸರಿಸಲಾಗುತ್ತಿದ್ದು, ಸರಕಾರ ಕೂಡಲೇ ಈ ಶಾಲೆಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಮಂಗಳವಾರ ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‍ಗೆ ಪತ್ರ ಬರೆದಿರುವ ಅವರು, ಬೆಂಗಳೂರು ಉತ್ತರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಮಗೆ ಸಲ್ಲಿಸಿರುವ ವರದಿಯಲ್ಲಿ ಸಿಂಧಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಮಾತನಾಡಿರುವುದಕ್ಕೆ ದಂಡ ವಿಧಿಸಿರುವುದನ್ನು ಶಾಲೆಯ ಪ್ರಾಂಶುಪಾಲರೇ ಒಪ್ಪಿಕೊಂಡಿರುವ ಬಗ್ಗೆ ಖಚಿತ ದಾಖಲೆಗಳಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಶಾಲೆಯ ವಿದ್ಯಾರ್ಥಿಗಳೇ ಕನ್ನಡದಲ್ಲಿ ಮಾತನಾಡಿದಕ್ಕೆ ತಮ್ಮಿಂದ ದಂಡ ವಸೂಲಿ ಮಾಡಲಾಗಿದೆ ಎಂಬ ಅಂಶವನ್ನು ಉಪ ನಿರ್ದೇಶಕರ ಭೇಟಿಯ ಸಂದರ್ಭದಲ್ಲಿ ಬಹಿರಂಗಪಡಿಸಿದ್ದು, ರಾಜಧಾನಿಯ ಪ್ರತಿಷ್ಠಿತ ಶಾಲೆಯೊಂದು ಮಕ್ಕಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಈ ರೀತಿ ಕಸಿಯುತ್ತಿರುವುದು, ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿರುವುದು ಹಾಗೂ ಕನ್ನಡದ ಕುರಿತಂತೆ ಲಘು ಧೋರಣೆಯನ್ನು ಅನುಸರಿಸುತ್ತಿರುವುದು, ಕನ್ನಡದ ಹಿತದೃಷ್ಠಿಯಿಂದ ಅತ್ಯಂತ ನಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡ ವಿರೋಧಿ ಧೋರಣೆ ತೋರುವ ಇಂತಹ ಶಾಲೆಗಳ ವಿರುದ್ಧ ಯಾವುದೇ ಕಠಿಣ ಕ್ರಮವಾಗದಿದ್ದರೆ, ಸಮಾಜಕ್ಕೆ ಉತ್ತಮ ಸಂದೇಶ ಹೋಗುವುದಿಲ್ಲ. ಹಾಗೂ ಕನ್ನಡ ತನ್ನ ನೆಲದಲ್ಲಿಯೇ ಪರಕೀಯ ಸ್ಥಾನಕ್ಕೆ ತೃಪ್ತಿಪಡಬೇಕಾದ ಅನಿವಾರ್ಯತೆಗೆ ಸಾಕ್ಷಿಯಾಗುತ್ತದೆ ಎಂದು ತಿಳಿಸಿದ್ದಾರೆ.

ಶಾಲೆಯ ಮಾನ್ಯತೆ ರದ್ದುಗೊಳಿಸಿ:

‘ಸರಕಾರದ ಕನ್ನಡ ಪರ ನಿಲುವು ಸಾಬೀತು ಮಾಡಲು ಶಾಲಾ ಶಿಕ್ಷಣ ಸಚಿವರು ಮನಸ್ಸು ಮಾಡಬೇಕಿದೆ. ನೆಲದ ಭಾμÉಯನ್ನು ಉಲ್ಲಂಘಿಸಿರುವ ಸಿಂಧಿ ಪ್ರೌಢಶಾಲೆಯ ಮಾನ್ಯತೆಯನ್ನು ರದ್ದುಪಡಿಸಿ, ಎನ್‍ಒಸಿ ಹಿಂಪಡೆಯಬೇಕು. ಶಿಕ್ಷಣ ಸಚಿವರ ಈ ಕ್ರಮವು ಇಡೀ ರಾಜ್ಯವನ್ನು ತಲುಪಿದಲ್ಲಿ ಬೇರೆ ಶಿಕ್ಷಣ ಸಂಸ್ಥೆಗಳಿಗೂ ಇದು ಪಾಠವಾಗಲಿದೆ. ಕನ್ನಡದ ಹಿತದೃಷ್ಠಿಯಿಂದ ಈ ಕಠಿಣ ಕ್ರಮ ಅನಿವಾರ್ಯ’

-ಡಾ.ಪುರುಷೋತ್ತಮ ಬಿಳಿಮಲೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News