×
Ad

ʼಗಂಗಾ ಕಲ್ಯಾಣ ಯೋಜನೆ’ ಯಡಿ 15 ಸಾವಿರ ಕೊಳವೆ ಬಾವಿ ಕೊರೆಯುವ ಗುರಿ: ಸಚಿವ ಶಿವರಾಜ್ ತಂಗಡಗಿ

Update: 2023-12-06 18:44 IST

ಬೆಳಗಾವಿ: ‘2024ರ ಮಾರ್ಚ್ ವೇಳೆಗೆ ‘ಗಂಗಾ ಕಲ್ಯಾಣ ಯೋಜನೆ’ಯಡಿ 15 ಸಾವಿರ ಕೊಳವೆ ಬಾವಿಗಳನ್ನು ಕೊರೆಸುವ ಗುರಿ ಹೊಂದಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ.

ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಆಡಳಿತ ಪಕ್ಷದ ಸದಸ್ಯ ಪುಟ್ಟರಂಗಶೆಟ್ಟಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಪ್ರತಿಯೊಂದು ನಿಗಮಕ್ಕೂ ಗುರಿ ನಿಗದಿಪಡಿಸಿ ಕೊಳವೆ ಬಾವಿ ಕೊರೆಸಲಾಗುತ್ತದೆ. ಹಿಂದಿನ ನಾಲ್ಕು ವರ್ಷದಲ್ಲಿ ಒಂದೇ ಒಂದು ಕೊಳವೆ ಬಾವಿ ಕೊರೆದಿಲ್ಲ.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈಗಾಗಲೇ ನಾಲ್ಕೈದು ತಿಂಗಳಲ್ಲಿ ಅಂದಾಜು ರಾಜ್ಯವಿಡೀ 4 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿ, ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಮಾರ್ಚ್ ಅಂತ್ಯದೊಳಗೆ ಇಲಾಖೆಯಿಂದ 15ಸಾವಿರ ಕೊಳವೆ ಬಾವಿ ಕೊರೆಯುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ನಿಗಮ ಭಾಷಣಕ್ಕೆ ಸೀಮಿತ:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಹತ್ತು ನಿಗಮಗಳು ಕಾರ್ಯ ನಿರ್ವಹಿಸುತ್ತಿದ್ದು, ಹಿಂದಿನ ಸರಕಾರ ಕೇವಲ ಭಾಷಣದಲ್ಲಿ ನಿಗಮ ಘೋಷಣೆ ಮಾಡಿತ್ತೇ ಹೊರತು ನಿಗಮಗಳ ನೋಂದಣಿಯನ್ನೂ ಮಾಡಿಸಿರಲಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ, ಬಿಜೆಪಿ ಸದಸ್ಯ ಧೀರಜ್ ಮುನಿರಜು ಪ್ರಶ್ನೆಗೆ ಉತ್ತರ ನೀಡಿದರು.

ಹಿಂದಿನ ಸರಕಾರ ಹೋದಲೆಲ್ಲಾ ಭಾಷಣದಲ್ಲಿ ನಿಗಮಗಳನ್ನು ಮಾಡುವ ಬಗ್ಗೆ ಘೋಷಣೆ ಮಾಡಿ ಆದೇಶ ಮಾಡಿದ್ದರು. ನಿಗಮಗಳ ನೋಂದಣಿಯನ್ನೂ ಮಾಡಿಸಿರಲಿಲ್ಲ. ಇದೀಗ ನಾವು ನಿಗಮಗಳ ನೋಂದಣಿ ಮಾಡಿಸಿದ್ದು, ನಿಗಮಗಳಿಗೆ ಅನುದಾನ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News