ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟ ಸಿದ್ದರಾಮಯ್ಯ ನಡೆಯನ್ನು ಟೀಕಿಸಿದ ತೇಜಸ್ವಿ ಸೂರ್ಯ: ರೈತ ವಿರೋಧಿ ಪೋಸ್ಟ್ ಮಾಡಿ ಅಳಿಸಿದ ಬಿಜೆಪಿ ಸಂಸದ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿರುವ ರಾಜ್ಯ ಸರಕಾರದ ನಡೆಯನ್ನು ಟೀಕಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆ ಬಳಿಕ ತನ್ನ ಎಕ್ಸ್ ಪೋಸ್ಟ್ ಅನ್ನು ಅಳಿಸಿದ್ದಾರೆ.
ತೇಜಸ್ವಿ ಸೂರ್ಯ ಈ ಹಿಂದೆ ಕೂಡ ರೈತ ವಿರೋಧಿ ಹೇಳಿಕೆಯನ್ನು ನೀಡಿದ್ದರು. ರೈತರ ಸಾಲ ಮನ್ನಾ ಮಾಡುವುದನ್ನು ಟೀಕಿಸಿ ವಿವಾದಕ್ಕೀಡಾಗಿದ್ದರು. ಯುಪಿಎ ಸರಕಾರ ರೈತರ ಲಕ್ಷಾಂತರ ಕೋಟಿ ಹಣ ಸಾಲಮನ್ನಾ ಮಾಡಿದ್ದನ್ನು ಪ್ರಶ್ನಿಸಿದ್ದರು. ರೈತರ ಸಾಲ ಮನ್ನಾ ಮಾಡಿದರೆ ಯಾವುದೇ ರೀತಿಯ ಉಪಯೋಗ ಇಲ್ಲ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು.
ಇದೀಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರೈತರ ಪರ ರಾಜ್ಯ ಸರಕಾರ ತೆಗೆದುಕೊಂಡ ನಿರ್ಧಾರವನ್ನು ಎಕ್ಸ್‌ನಲ್ಲಿ ಟೀಕಿಸಿದ್ದಾರೆ. ಆ ಬಳಿಕ ತನ್ನ ಪೋಸ್ಟ್ ಅನ್ನು ಡಿಲಿಟ್ ಮಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ನಲ್ಲೇನಿತ್ತು?:
ʼಉದ್ದಿಮೆಗಳನ್ನು ಆಕರ್ಷಿಸುವ ಹಾಗೂ ಉದ್ಯೋಗಗಳನ್ನು ಸೃಷ್ಟಿಸುವ ರೀತಿ ಇದಾಗಿದೆ. ಕರ್ನಾಟಕ ಸರಕಾರ ನಾರಾ ಲೋಕೇಶ್ ಅವರಿಂದ ಪಾಠ ಕಲಿತು ತನ್ನ ಹಾದಿಯನ್ನು ಸರಿಪಡಿಸಿಕೊಳ್ಳಬೇಕೆಂದು ಎಂದು ಆಶಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ರಾಜಕೀಯ ಇಚ್ಛಾಶಕ್ತಿ ತೋರ್ಪಡಿಸಬೇಕು. ಎಚ್ಎಎಲ್, ಎನ್ಎಎಲ್, ಡಿಆರ್‌ಡಿಒ, ಇಸ್ರೋ, ಏರ್‌ಬಸ್, ಬೋಯಿಂಗ್ ಸೇರಿದಂತೆ ಸರಕಾರಿ, ಖಾಸಗಿ ಸಂಸ್ಥೆಗಳು, ನವೋದ್ಯಮಗಳನ್ನು ಹೊಂದಿರುವ ಬೆಂಗಳೂರು ಭಾರತದ ಏರೋಸ್ಪೇಸ್ ರಾಜಧಾನಿ ಆಗಿದೆʼ ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಅವರ ಪೋಸ್ಟ್ ತುಣುಕನ್ನು ಎಕ್ಸ್‌ನಲ್ಲಿ ಹಂಚಿಕೊಂಡ ಪತ್ರಕರ್ತ ಮುಹಮ್ಮದ್ ಝುಭೇರ್, ದೇವನಹಳ್ಳಿ ರೈತರ ಭೂಸ್ವಾಧೀನ ರದ್ದುಗೊಳಿಸಿದ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಟೀಕಿಸಿದ ಬಿಜೆಪಿ ಯುವ ಸಂಸದ ಇದೀಗ ತನ್ನ ಟ್ವೀಟ್‌ನ್ನು ಅಳಿಸಿದ್ದಾರೆ ಎಂದು ಹೇಳಿದ್ದಾರೆ.
ನಟ ಪ್ರಕಾಶ್ ರಾಜ್ ಅವರು ತೇಜಸ್ವಿ ಸೂರ್ಯ ಮಾಡಿರುವ ಪೋಸ್ಟ್‌ನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ತೇಜಸ್ವಿ ಸೂರ್ಯ ಅವರೇ, ರೈತ ವಿರೋಧಿ ಪೋಸ್ಟ್‌ನ್ನು ಯಾಕೆ ಡಿಲಿಟ್ ಮಾಡಿದ್ದೀರಿ? ಹೆದರಿಕೊಂಡ್ರಾ? ಎಂದು ಪ್ರಶ್ನಿಸಿದ್ದಾರೆ.