×
Ad

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕೈದಿಗೆ ನೆರವು ನೀಡಿದ್ದ ಪ್ರಕರಣ: ಎಎಸ್‌ಐ ಸಹಿತ ಮೂವರು ಆರೋಪಿಗಳ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆ

Update: 2026-01-02 20:41 IST

ಬೆಂಗಳೂರು, ಜ.2: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕೈದಿ ಟಿ.ನಸೀರ್‌ಗೆ ನೆರವು ನೀಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಈ ಪ್ರಕರಣದಲ್ಲಿ ಎರಡನೇ ದೋಷಾರೋಪ ಪಟ್ಟಿ ಇದಾಗಿದ್ದು, ಆರೋಪಿ ಜುನೈದ್‌ನ ತಾಯಿ ಅನೀಸ್ ಫಾತಿಮಾ, ಎಎಸ್‌ಐ ಚಾಂದ್ಪಾಷಾ ಎ. ಹಾಗೂ ಕಾರಾಗೃಹದ ವೈದ್ಯ ಡಾ.ನಾಗರಾಜ್ ಎಸ್. ವಿರುದ್ಧ ಐಪಿಸಿ, ಯುಎ(ಪಿ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಕರ್ನಾಟಕ ಕಾರಾಗೃಹ ಕಾಯ್ದೆಯ ವಿವಿಧ ವಿಭಾಗಗಳಡಿಯಲ್ಲಿ ಆರೋಪಿಗಳು ಎಂದು ದೋಷಾರೋಪ ಪಟ್ಟಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ಈ ಹಿಂದೆಯೂ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪರಾರಿಯಾಗಿದ್ದ ಆರೋಪಿ ಜುನೈದ್ ಸಹಿತ 9 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿತ್ತು. ಇದೀಗ ಹೆಚ್ಚುವರಿಯಾಗಿ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ.

ಜುನೈದ್‌ನ ತಾಯಿ ಅನೀಸ್ ಫಾತಿಮಾ, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಕೈದಿ ಟಿ.ನಸೀರ್‌ಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿದ್ದರು. ಮಗನ ನಿರ್ದೇಶನದ ಮೇರೆಗೆ ಮದ್ದುಗುಂಡುಗಳು ಮತ್ತು ವಾಕಿ-ಟಾಕಿಗಳನ್ನು ಸಂಗ್ರಹಿಸಿ ಪ್ರಕರಣದ ವಿವಿಧ ಆರೋಪಿಗಳ ನಡುವೆ ಸಂವಹನವನ್ನು ಸುಗಮಗೊಳಿಸಿದ್ದರು. ಅಲ್ಲದೆ, ಪ್ರಮುಖ ಆರೋಪಿ ಸಲ್ಮಾನ್ ಖಾನ್‌ಗೆ ಆಶ್ರಯ ನೀಡುವಲ್ಲಿ ಮತ್ತು ಅವನ ಪ್ರಯಾಣ ದಾಖಲೆಗಳನ್ನು ವ್ಯವಸ್ಥೆ ಮಾಡುವ ಮೂಲಕ ದುಬೈಗೆ ಪರಾರಿಯಾಗಲು ಸಹಾಯ ಮಾಡಿದ್ದರು ಎಂಬುದು ಎನ್ಐಎ ತನಿಖೆಯಿಂದ ಬಹಿರಂಗವಾಗಿತ್ತು. ನಂತರ ಆಫ್ರಿಕಾದ ರುವಾಂಡಾ ರಿಪಬ್ಲಿಕ್‌ನಲ್ಲಿದ್ದ ಸಲ್ಮಾನ್ ಖಾನ್‌ನನ್ನು ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು.

ಬೆಂಗಳೂರು ನಗರದ ನಗರ ಸಶಸ್ತ್ರ ಮೀಸಲು- ದಕ್ಷಿಣ ವಿಭಾಗದಲ್ಲಿ ಎಎಸ್‌ಐ ಆಗಿದ್ದ ಚಾಂದ್ ಪಾಷಾ ಕೈದಿಗಳ ಬೆಂಗಾವಲು ಕರ್ತವ್ಯದಲ್ಲಿದ್ದಾಗ ಟಿ.ನಸೀರ್‌ನನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ಸಮಯ, ಮಾರ್ಗದ ವಿವರಗಳನ್ನು ಆರೋಪಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ಮತ್ತು ಇದಕ್ಕಾಗಿ ಆರೋಪಿ ಸಲ್ಮಾನ್ ನಿಂದ ಪ್ರತಿಫಲವನ್ನು ಪಡೆಯುತ್ತಿದ್ದ.

ಪರಪ್ಪನ ಅಗ್ರಹಾರ ಕಾರಾಗೃಹದ ಆಸ್ಪತ್ರೆಯಲ್ಲಿ ಮನೋವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ನಾಗರಾಜ್, ಕಾನೂನು ಬಾಹಿರವಾಗಿ ಜೈಲಿನಲ್ಲಿ ಕೈದಿಗಳಿಂದ ಹಣ ಪಡೆದು ಮೊಬೈಲ್ ಮಾರಾಟ ಮಾಡುತ್ತಿದ್ದ. ಟಿ.ನಸೀರ್‌ಗೂ ಮೊಬೈಲ್ ಮಾರಾಟ ಮಾಡಿದ್ದ ಎಂದು ಎನ್ಐಎ ವಿವರಿಸಿರುವುದಾಗಿ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News