×
Ad

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ‌: ಗೃಹ ಸಚಿವ ಡಾ. ಜಿ.ಪರಮೇಶ್ವರ

Update: 2025-05-30 15:26 IST

ಬೆಂಗಳೂರು, (ಮೇ 30):- ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಘಟನಾವಳಿಗಳಿಗೆ ಸಂಬಂಧಿಸಿದಂತೆ ಅಲ್ಲಿನ ಜನರ ಆಪೇಕ್ಷೆ ಮೇರೆಗೆ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಜನಸಮುದಾಯ ಆಪೇಕ್ಷೆಪಟ್ಟಿದ್ದರಿಂದ ಅಧಿಕಾರಿಗಳನ್ನು ವರ್ಗಾಯಿಸಿದ್ದೇವೆ.‌ ಕಳೆದ ಬಾರಿ ಭೇಟಿ ನೀಡಿದಾಗ ಅಧಿಕಾರಿಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು. ಕೂಡಲೇ ಬದಲಾಯಿಸುವುದು ಸರಿಯಲ್ಲ‌ ಎಂಬ ಕಾರಣಕ್ಕೆ ಮಾಡಿರಲಿಲ್ಲ. ಈ ಬಾರಿಯೂ ಧ್ವನಿ ಎತ್ತಿದ್ದರಿಂದ ಬದಲಾಯಿಸಿದ್ದೇವೆ‌ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ‌. ಯಾರು ಏನೇ ಹೇಳಿದರು, ನಾವು ಇದನ್ನು ಸಹಿಸುವುದಿಲ್ಲ. ಆ ಭಾಗದಲ್ಲಿ ಶಾಂತಿ ನೆಲೆಸಬೇಕು. ಕರವಾಳಿ ಭಾಗದಲ್ಲಿ ಪ್ರಜ್ಞಾವಂತ ಜನರಿದ್ದಾರೆ. ಶಾಂತಿ ಕಾಪಾಡುವುದು ಬಹಳ ಮುಖ್ಯ ಎಂದು ತಿಳಿಸಿದ್ದೆ. ಇದು ಹೀಗೆ ನಡೆಯುತ್ತಿದ್ದರೆ ಸರ್ಕಾರ ಸಹಿಸುವುದಕ್ಕೆ ಆಗುತ್ತದೆಯೇ?  ದಕ್ಷಿಣ ಕನ್ನಡ ಜಿಲ್ಲೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮಾದರಿಯಾಗಿರುವ ಜಿಲ್ಲೆ. ಯಾರು ಶಾಂತಿ ಕದಡುವುದಕ್ಕೆ ಪ್ರಯತ್ನಿಸುತ್ತಾರೆ, ಅವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದರು.


ಅಧಿಕಾರಿಗಳನ್ನು ಅನಿವಾರ್ಯವಾಗಿ ಬದಲಾಯಿಸಬೇಕಾದ ಪರಿಸ್ಥಿತಿ ಬಂದಿದ್ದರಿಂದ ಮಂಗಳೂರು ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಎಸ್‌ಪಿ, ಉಡುಪಿ ಎಸ್‌ಪಿಯನ್ನು ಬದಲಾಯಿಸಿದ್ದೇವೆ.‌ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಈಗಾಗಲೇ ಅವರಿಗೆ ಸೂಚನೆ ಕೊಟ್ಟಿದ್ದೇವೆ. ಮುಂದೆ ಇದನ್ನು ನಡೆಯುವುದಕ್ಕೆ ಬಿಡುವುದಿಲ್ಲ. ಜನಸಮುದಾಯವು ಇದಕ್ಕೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.‌

ಕೋಮು ಹಿಂಸೆ ನಿಗ್ರಹ ಕಾರ್ಯಪಡೆ ರಚನೆಗೆ ಕಾಲಾವಕಾಶ ಬೇಕಾಗಿತ್ತು. ನಿನ್ನೆ ಡಿಜಿಯವರೊಂದಿಗೆ ಚರ್ಚಿಸಿದ್ದೇನೆ. ಕಾರ್ಯಪಡೆಯನ್ನು ಯಾವ ರೀತಿ ನಿಯೋಜಿಸಬೇಕು. ಅವರಿಗೆ ನೀಡಬೇಕಾದ ಅಧಿಕಾರದ ಬಗ್ಗೆ ಚರ್ಚಿಸಲಾಗಿದೆ. ಉಡುಪಿ, ಮಂಗಳೂರು ಮತ್ತು ಶಿವಮೊಗ್ಗದಲ್ಲಿ ನಿಯೋಜಿಸುತ್ತೇವೆ ಎಂದರು.

ಪ್ರಚೋದನಾಕಾರಿ ಭಾಷಣಗಳಿಗೆ ಕಡಿವಾಣ ಹಾಕುತ್ತೇವೆ. ಈಗ ಇರುವ ಕಾನೂನು ಚೌಕಟ್ಟಿನಲ್ಲಿ ಮಾಡಬೇಕಾಗುತ್ತದೆ. ಇಂತಹ ಪ್ರಕರಣಗಳಿಗೆ ಕೋರ್ಟ್‌ಗಳಲ್ಲಿ ಅನೇಕ ಸಂದರ್ಭಗಳಲ್ಲಿ ತಡೆ ನೀಡುತ್ತಾರೆ. ಅಥವಾ ರದ್ದುಗೊಳಿಸುತ್ತಾರೆ. ಇದೆಲ್ಲವನ್ನು ನೋಡಿಕೊಂಡು ಮಾಡಬೇಕಾಗುತ್ತದೆ. ಸೋಷಿಯಲ್‌ ಮೀಡಿಯಾದಲ್ಲಿನ ಅನವಶ್ಯಕ ಪೋಸ್ಟ್‌ಗಳನ್ನು ನಿಯಂತ್ರಣ ಮಾಡುತ್ತೇವೆ ಎಂದರು ಹೇಳಿದರು.

ಸಚಿವ ದಿನೇಶ್ ಗುಂಡೂರಾವ್ ಅವರು ಮೊದಲಿನಿಂದಾನೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಬೇಡ ಎಂದಿದ್ದರು. ಅವರು ಈಗಿನ ಬೆಳವಣಿಗೆಯ ನಂತರ ಹೊಸದಾಗಿ ಹೇಳಿಲ್ಲ.‌ ನನಗೆ ದೂರವಾಗುತ್ತದೆ. ಆ ಭಾಗದಲ್ಲಿರುವವರಿಗೆ ಉಸ್ತುವಾರಿ ನೀಡಿದರೆ ಒಳ್ಳೆಯದು ಎಂದಿದ್ದರು. ಇನ್ನುಳಿದದ್ದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟದ್ದು‌ ಎಂದು ಪ್ರತಿಕ್ರಿಯಿಸಿದರು.

ನಾವು ರಾಜ್ಯದಲ್ಲಿನ ಯಾವುದೇ ಭಾಗವನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಕರಾವಳಿ ಇರಬಹುದು, ಉತ್ತರ ಕರ್ನಾಟಕ ಇರಬಹುದು, ಇನ್ನೊಂದು ಅಗಿರಬಹುದು.‌ ಯಾವ ಜಿಲ್ಲೆಯನ್ನು ಸಹ ನಿರ್ಲಕ್ಷ್ಯ ಮಾಡುವುದಿಲ್ಲ. ಕರಾವಳಿ ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ಗಮನ ಹರಿಸಬೇಕಿದೆ, ಅದನ್ನು ಮಾಡುತ್ತೇವೆ‌‌ ಎಂದರು.

ಘಟನೆಗಳ ಹಿನ್ನೆಲೆ ಏನಿದೆ. ಅದರ ಹಿಂದೆ ಯಾರಿದ್ದಾರೆ ಎಂಬ ಮೂಲ ಹುಡುಕುತ್ತಿದ್ದೇವೆ. ರಾಜಕೀಯ ಕಾರಣ ಅಥವಾ ಬೇರೆ ಕಾರಣಕ್ಕೆ ಭಾಗಿಯಾಗಿದ್ದರು ಕ್ರಮ ತೆಗೆದುಕೊಳ್ಳುತ್ತೇವೆ‌ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News