×
Ad

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಕುರಿತು ಪಕ್ಷದಿಂದ ಸದ್ಯವೇ ನಿರ್ಧಾರ: ವಿಜಯೇಂದ್ರ

Update: 2025-06-21 12:12 IST

ಬೆಂಗಳೂರು: ರಾಜ್ಯಾಧ್ಯಕ್ಷ  ಹುದ್ದೆ ಕುರಿತು ಪಕ್ಷವು ಸದ್ಯವೇ ನಿರ್ಧರಿಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕಳೆದ ಒಂದೂಕಾಲು ವರ್ಷದಿಂದ ಕೊಟ್ಟಿರುವ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತನಾಗಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದೇನೆ ಎಂಬ ಅನಿಸಿಕೆ ನನ್ನದು. ಕೇಂದ್ರ ಮತ್ತು ರಾಷ್ಟ್ರೀಯ ನಾಯಕರಿಗೆ ಕೊಡಬೇಕಾದ ಮಾಹಿತಿಯನ್ನು ಕೊಡುತ್ತ ಬಂದಿದ್ದೇನೆ ಎಂದು ಹೇಳಿದರು.

ನಿಮ್ಮನ್ನೇ ಮುಂದುವರೆಸುವ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ ನಗುತ್ತ ಉತ್ತರ ಕೊಟ್ಟ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲ ಜಿಲ್ಲಾಧ್ಯಕ್ಷರ ಅಭಿಪ್ರಾಯ ಪಡೆದು, ಪಕ್ಷದ ಮುಖಂಡರ ಅಭಿಮತ ಪಡೆದುಕೊಂಡು ಅಂತಿಮವಾಗಿ ಯಾರನ್ನು ಮಾಡಿದರೆ ಒಳ್ಳೆಯದು ಎಂಬ ಕುರಿತು ಅಂತಿಮ ನಿರ್ಧಾರ ಸದ್ಯವೇ ಆಗುವ ವಿಶ್ವಾಸವಿದೆ ಎಂದು ತಿಳಿಸಿದರು.

ನಾನು ಮತ್ತು ಪಕ್ಷದ ಕೆಲವು ಹಿರಿಯ ಮುಖಂಡರು ನಿನ್ನೆ ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ಮಾರ್ಗದರ್ಶಕರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೇವೆ. ಸುಮಾರು 20-25 ನಿಮಿಷಗಳ ಕಾಲ ರಾಜ್ಯ ರಾಜಕಾರಣ, ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಿದ್ದೇವೆ ಎಂದು ವಿವರಿಸಿದರು.

ಕಾಂಗ್ರೆಸ್ ಸರಕಾರವು ಆಡಳಿತಕ್ಕೆ ಬಂದಾಗಿನಿಂದ ಒಡೆದಾಳುವ ನೀತಿ ಅನುಸರಿಸುತ್ತಿದೆ. ಸರಕಾರವು ರಾಜ್ಯದ ಬಡವರು, ರೈತರಿಗೆ ಶಾಪವಾಗಿ ಪರಿಣಮಿಸಿದ ಕುರಿತು ಚರ್ಚೆ ಮಾಡಿದ್ದೇವೆ. ಅವರು ಸಮಾಧಾನದಿಂದ ಆಲಿಸಿದ್ದಾರೆ. ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶವಿದೆ. ಎಲ್ಲರೂ ವ್ಯತ್ಯಾಸಗಳನ್ನು ಮರೆತು ಒಟ್ಟಾಗಿ-ಒಂದಾಗಿ ಹೋಗಬೇಕೆಂದು ತಿಳಿಸಿದ್ದಾರೆ. ಆಗ ಮಾತ್ರ ಕಾರ್ಯಕರ್ತರಿಗೆ ಗೌರವ ಕೊಟ್ಟಂತಾಗುತ್ತದೆ. ಜನರು ನಮ್ಮಲ್ಲಿ ವಿಶ್ವಾಸ ಇಡುತ್ತಾರೆ ಎಂದು ಅವರು ಹೇಳಿದ್ದಾಗಿ ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅದಕ್ಕಿಂತ ಹೆಚ್ಚಿನ ಹೊಣೆಗಾರಿಕೆಯು ವಿಪಕ್ಷಕ್ಕೂ ಇದೆ. ರಾಜ್ಯ ಸರಕಾರದ ಈಗಿನ ಕಾರ್ಯವೈಖರಿ, ಕಾಂಗ್ರೆಸ್ ಸರಕಾರದ ಕರಾಳ ಮುಖವನ್ನು ಜನರ ಮುಂದೆ ಅನಾವರಣಗೊಸುವ ಕೆಲಸವನ್ನು ನಾವು ವಿಪಕ್ಷವಾಗಿ ಮಾಡುತ್ತ ಬಂದಿದ್ದೇವೆ. ಇದೆಲ್ಲವನ್ನೂ ವಿವರಿಸಿದಾಗ ಅಮಿತ್ ಶಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಕೆ.ಎಸ್.ಈಶ್ವರಪ್ಪ ಅವರ ಮರುಸೇರ್ಪಡೆ ಕುರಿತು ಪ್ರಶ್ನಿಸಿದಾಗ, ರಾಜ್ಯಮಟ್ಟ ಅಥವಾ ಕೇಂದ್ರ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News