×
Ad

ರಾಜ್ಯೋತ್ಸವ ಪುರಸ್ಕೃತ ಯಕ್ಷಗಾನ ಕಲಾವಿದ ಅವಹೇಳನಕಾರಿ ಮಾತನಾಡಿದ ವೀಡಿಯೊ ವೈರಲ್

Update: 2023-11-02 17:29 IST

ಮಂಗಳೂರು: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಯಕ್ಷಗಾನ ಪ್ರಸಂಗವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ಯಕ್ಷಗಾನ ಪ್ರಸಂಗದ ವೀಡಿಯೋ ತುಣುಕಿನಲ್ಲಿ ಯಕ್ಷಗಾನ ಪಾತ್ರಧಾರಿ ಆರ್ಗೋಡು ಮೋಹನದಾಸ್ ಶೆಣೈ ಮುಸ್ಲಿಂ ವ್ಯಕ್ತಿಯಂತೆ ಕಾಣುವ ಪಾತ್ರಧಾರಿ ಜೊತೆಗಿನ ಸಂಭಾಷಣೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಅವಹೇಳನ ಮಾಡಿ ಮಾತಾಡಿದ್ದಾರೆ.

ವಿಡಿಯೋದಲ್ಲಿ ಕಾಣುತ್ತಿರುವ ಅವಹೇಳನಕಾರಿ ಮಾತಾಡಿರುವ ಪಾತ್ರಧಾರಿ ಆರ್ಗೋಡು ಮೋಹನದಾಸ್ ಶೆಣೈ ಅವರೇ ಎಂದು ಯಕ್ಷಗಾನ ಕ್ಷೇತ್ರದಲ್ಲಿ ದಶಕಗಳಿಂದ ಇರುವ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ನಾಲ್ವರು ವಾರ್ತಾಭಾರತಿಗೆ ಖಚಿತಪಡಿಸಿದ್ದಾರೆ. ಬಡಗುತಿಟ್ಟಿನ ಹಾಸ್ಯ ಪಾತ್ರಧಾರಿ ರಮೇಶ್ ಭಂಡಾರಿ ಮುಸ್ಲಿಂ ವ್ಯಾಪಾರಿಯ ವೇಶದಲ್ಲಿದ್ದರೆ ವಿಕ್ರಮಾದಿತ್ಯನ ವೇಷದಲ್ಲಿ ಬಡಗುತಿಟ್ಟಿನ ಪ್ರಧಾನ ವೇಷಧಾರಿ ಆರ್ಗೋಡು ಮೋಹನ್ ದಾಸ್ ಶೆಣೈ ಈ ಪಾತ್ರ ಮಾಡುತ್ತಾ, ಇದೇ ಹೇಳಿಕೆ ನೀಡುತ್ತಾ ಬಂದಿದ್ದಾರೆ ಎಂದು ದಶಕಗಳಿಂದ ಯಕ್ಷಗಾನ ವೀಕ್ಷಿಸುವ ಇನ್ನೊಬ್ಬರೂ ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ.

"ನಿಮ್ಮ ಜಾತಿಯೇ ಹಾಗೆ, ಎಲ್ಲ ಬದಲಾವಣೆ.... ನಾವು ಎಡಗಡೆಯಿಂದ ಬರೆದರೆ, ನೀವು ಬಲಗಡೆಯಿಂದ ಬರೆಯುತ್ತೀರಿ... ನಾವು ಶಾಸ್ತ್ರ ಓದಿದಾಗ ನೀವು ಅಲ್ಲಾಹು ಅಂತ ಬೊಬ್ಬೆ ಹಾಕುತ್ತೀರಿ... ನಮಗೆ ಅದು ಏನು ಅರ್ಥ ಆಗುತ್ತದೆ? ನಾವು ಹೇಳಿದ್ದು ಅಲ್ಲ ಅಂತ ನೀವು ಹೇಳುತ್ತೀರಿ ಅಂತ. ಎಲ್ಲವನ್ನು ಬದಲಾಯಿಸುತ್ತೀರಿ ನೀವು.... ಈ ತಿನ್ನುವ ಸ್ಥಳವನ್ನು ಬದಲಾಯಿಸಿಲ್ಲ ಯಾಕೆ?" ಎಂದು ಆರ್ಗೋಡು ಮೋಹನ್ ದಾಸ್ ಶೆಣೈ ಅವರು ಅವಹೇಳನಕಾರಿಯಾಗಿ ಮಾತನಾಡಿರುವ ಯಕ್ಷಗಾನ ಪ್ರಸಂಗದ ವೀಡಿಯೊ ಈಗ ವೈರಲ್ ಆಗಿದೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಲೆಯಲ್ಲೂ ಕೋಮುವಾದಿ ವಿಷ ಬೆರೆಸುವ ಇಂಥವರಿಂದ ಯಕ್ಷಗಾನಕ್ಕೆ ಅವಮಾನ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹವರಿಗೆ ರಾಜ್ಯೋತ್ಸವ ದಂತಹ ಪ್ರತಿಷ್ಠಿತ ಪ್ರಶಸ್ತಿ ಕೊಟ್ಟಿದ್ದು ಹೇಗೆ ಎಂದೂ ಪ್ರಶ್ನಿಸುತ್ತಿದ್ದಾರೆ.

ಈ ಬಗ್ಗೆ 'ವಾರ್ತಾಭಾರತಿ' ಆರ್ಗೋಡು ಮೋಹನದಾಸ್ ಶೆಣೈಯವರನ್ನು ಸಂಪರ್ಕಿಸಿದಾಗ "ನಾನು ಆ ವಿಡಿಯೋ ನೋಡಿಲ್ಲ" ಎಂದರು. 73 ವರ್ಷದ ಮೋಹನದಾಸ್ ಶೆಣೈ 2 ವರ್ಷಗಳ ಹಿಂದೆ ವೃತ್ತಿ ತಿರುಗಾಟದಿಂದ ನಿವೃತ್ತರಾಗಿದ್ದಾರೆ.  

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News