×
Ad

ಪುತ್ರನ ಜತೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿ

Update: 2023-10-20 18:36 IST

ಉಮೇಶ್ - ಮೃತ ವ್ಯಕ್ತಿ

ಮಂಡ್ಯ, ಅ.20: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನ ಜತೆ ಸೇರಿಕೊಂಡು ಪತ್ನಿಯೇ ಪತಿಯನ್ನು ಹತ್ಯೆ ಮಾಡಿರುವ ಘಟನೆ ಮದ್ದೂರು ತಾಲೂಕು ಚಾಪುರದೊಡ್ಡಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಕೊಲೆಯಾದ ವ್ಯಕ್ತಿ ಉಮೇಶ್ (50) ಎಂದು ಗುರುತಿಸಲಾಗಿದ್ದು, ಆರೋಪಿಗಳಾದ ಪತ್ನಿ ಸವಿತ ಮತ್ತು ಪುತ್ರ ಶಶಾಂಕ್  ನನ್ನು ಪೊಲೀಸರು ಬಂಧಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹಾಗಾಗ ಜಗಳ ನಡೆಯುತ್ತಿದ್ದು, ಕೆಲವು ದಿನಗಳ ಹಿಂದೆ ತಾಯಿ ಮತ್ತು ಮಗ ಸೇರಿಕೊಂಡು ಉಮೇಶ್‍ ಅವರ ಕಾಲು ಮುರಿದಿದ್ದರು. ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಉಮೇಶ್ ಚೇತರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಶನಿವಾರ ಪಿತೃಪಕ್ಷದ ಹಬ್ಬದ ಇದ್ದ ಹಿನ್ನೆಲೆಯಲ್ಲಿ ಉಮೇಶ್ ಗುರುವಾರ ಗ್ರಾಮದ ತನ್ನ ಮನೆಗೆ ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮತ್ತೆ ಜಗಳ ಮರುಕಳಿಸಿ ಪತ್ನಿ, ಪುತ್ರ ಇಬ್ಬರೂ ಸೇರಿಕೊಂಡು ಉಮೇಶನನ್ನು ಹತ್ಯೆಗೈದು ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮದ್ದೂರು ಸಿಪಿಐ ವೆಂಕಟೇಗೌಡ, ಬೆಸಗರಹಳ್ಳಿ ಪೊಲೀಸ್ ಠಾಣೆ ಪಿಎಸ್ಸೈ ಮಲ್ಲಪ್ಪ ಮತ್ತು ಸಿಬ್ಬಂದಿ ಪರಿಶೀಲಿಸಿ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಸಗರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News