ತೀರ್ಥಹಳ್ಳಿ: ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಮೃತ್ಯು
Update: 2023-10-19 15:54 IST
ನಾರಾಯಣ ಪೂಜಾರ್ - ಮೃತ ರೈತ
ಶಿವಮೊಗ್ಗ, ಅ.19: ಸಾಲಭಾದೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾ.ಪಂ.ವ್ಯಾಪ್ತಿಯ ದಂಡಿನಕುಡಿಗೆಯ ರೈತ ನಾರಾಯಣ ಪೂಜಾರ್ (68) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ವರದಿಯಾಗಿದೆ.
ಇತ್ತೀಚೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನಾರಾಯಣ ಪೂಜಾರ್ ರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ , ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರದಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ರೈತ ನಾರಾಯಣ ಪೂಜಾರ್ ಅರ್ಧ ಎಕರೆ ಅಡಿಕೆ ತೋಟ ಹೊಂದಿದ್ದು,ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಬಂದ ಹಿನ್ನೆಲೆಯಲ್ಲಿ ಬೇಸತ್ತಿದ್ದರು ಹಾಗೂ ಕೈಮರ ಸಹಕಾರಿ ಸೊಸೈಟಿಯಲ್ಲಿ ಸಾಲ ಮಾಡಿದ್ದರು ಎನ್ನಲಾಗಿದೆ. ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.
ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.