ಮುಖ್ಯಮಂತ್ರಿ ಬದಲಾವಣೆ ಚರ್ಚೆಯೇ ಇಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬುಧವಾರ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡಿ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್‍ಗೆ ಮಾಹಿತಿ ನೀಡಲಿದ್ದಾರೆ. ಅದನ್ನು ಹೊರತುಪಡಿಸಿದರೆ ವಿಶೇಷವೇನೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ಅಧಿಕಾರವಧಿಯಲ್ಲಿನ ಹಲವು ಹಗರಣಗಳು ತನಿಖಾ ಹಂತದಲ್ಲಿವೆ. ಇಲ್ಲಿ ಹೊಂದಾಣಿಕೆ ರಾಜಕಾರಣ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೋವಿಡ್ ಕಾಲದಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ಕುರಿತ ವರದಿ ಈ ತಿಂಗಳ ಅಂತ್ಯಕ್ಕೆ ಸರಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಅದರಲ್ಲಿ ಯಾವ ಅಂಶಗಳಿವೆ ಎಂಬುದು ನಮಗೆ ಗೊತ್ತಿಲ್ಲ. ವರದಿ ಬಂದ ಬಳಿಕ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡುವಂತೆ ವೈಯಕ್ತಿಕವಾಗಿ ಮನವಿ ಸಲ್ಲಿಸಿದ್ದ ಟಿ.ಜೆ.ಅಬ್ರಹಾಂ ಅವರ ಅರ್ಜಿಯನ್ನು ರಾಜ್ಯಪಾಲರು ಪರಿಗಣಿಸುವುದಾದರೆ, ಕುಮಾರಸ್ವಾಮಿ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಗೆ ಏಕೆ ಅನುಮತಿ ನೀಡುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಅವರು ಕೇಳಿದರು.