ವಿವಿಗಳಲ್ಲಿ ಆರ್ಥಿಕ ಶಿಸ್ತು ಇಲ್ಲ; ಕುಲಪತಿಗಳೊಂದಿಗೆ ಶೀಘ್ರವೇ ಸಭೆ: ಸಚಿವ ಡಾ.ಎಂ.ಸಿ.ಸುಧಾಕರ್
ಬೆಂಗಳೂರು, ಜು.17: ‘ಹಿಂದಿನ ಸರಕಾರ ಅವೈಜ್ಞಾನಿಕವಾಗಿ ಏಳು ವಿಶ್ವ ವಿದ್ಯಾಲಯಗಳನ್ನು ತೆರೆದಿದ್ದು, ಮಂಡ್ಯದಲ್ಲಿ ಒಂದು ಕಾಲೇಜಿಗೆ ಒಂದು ವಿಶ್ವ ವಿದ್ಯಾಲಯ ತರೆಯಲಾಗಿದೆ. ಅನೇಕ ವಿವಿಗಳಲ್ಲಿ ಆರ್ಥಿಕ ಶಿಸ್ತು ಇಲ್ಲದಂತಾಗಿದ್ದು, ಈ ಕುರಿತು ಎಲ್ಲ ವಿವಿಯ ಕುಲಪತಿಗಳೊಂದಿಗೆ ಸಭೆ ನಡೆಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ವಿಧಾನ ಪರಿಷತ್ತಿನಲ್ಲಿ ನಿಯಮ 72ರಡಿ ಬಿಜೆಪಿಯ ಸದಸ್ಯ ಎಸ್.ವಿ.ಸಂಕನೂರ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ‘ಹಿಂದಿನ ಸರಕಾರ ಸಾಧಕ-ಬಾಧಕಗಳನ್ನು ಪರಿಶೀಲಿಸದೆ ಏಕಾಏಕಿ ಜಿಲ್ಲೆಗೊಂಡು ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು. ಅದರಂತೆ ರಾಜ್ಯದಲ್ಲಿ ಹೊಸದಾಗಿ ಏಳು ವಿವಿಗಳು ಆರಂಭವಾಗಿವೆ. ಸಮರ್ಪಕ ಹಣಕಾಸು ನಿಗದಿ ಮಾಡದೆ ವಿವಿಗಳಲ್ಲಿ ಆರ್ಥಿಕ ಶಿಸ್ತು ಇಲ್ಲದಂತಾಗಿದೆ’ ಎಂದು ಹೇಳಿದರು.
ಕುವೆಂಪು ವಿಶ್ವ ವಿದ್ಯಾಲಯ, ಜನಪದ ವಿಶ್ವ ವಿದ್ಯಾಲಯ ಸೇರಿದಂತೆ ಅನೇಕ ವಿವಿಗಳಲ್ಲಿ ಆರ್ಥಿಕ ಶಿಸ್ತು ಇಲ್ಲೂ, ನೇಮಕಾತಿಯಲ್ಲಿ ಪಾರದರ್ಶಕತೆಯೂ ಇಲ್ಲ. ಇದೇ ರೀತಿ ಮುಂದುವರೆದರೆ ರಾಜ್ಯದ ವಿವಿಗಳು ಸಮಸ್ಯೆಗೆ ಸಿಲಕುತ್ತವೆ. ಉನ್ನತ ವಿದ್ಯಾಭ್ಯಾಸ ಕಲಿಯಬೇಕು ಎಂಬ ವಿದ್ಯಾರ್ಥಿಗಳ ಕನಸು ಕನಸಾಗಿಯೇ ಉಳಿಯಲಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿವಿಗಳ ಸಮಸ್ಯೆಯನ್ನು ಪರಿಹರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗುವುದು ಎಂದರು.
ಇದೇ ವೇಳೆ ಎಸ್.ವಿ.ಸಂಕನೂರು ಮಧ್ಯಪ್ರವೇಶಿಸಿ, ಧಾರವಾಡದ ಕರ್ನಾಟಕ ವಿವಿಯಲ್ಲಿ ಹಿಂದಿನ 5 ವರ್ಷಗಳಲ್ಲಿ ಸಿಬ್ಬಂದಿ ವೇತನ ಮತ್ತು ಪಿಂಚಣಿಯ 151ಕೋಟಿ ರೂ.ಬಾಕಿ ಉಳಿಸಿಕೊಂಡಿದೆ. ಇಷ್ಟು ಮೊತ್ತವನ್ನು ಬಾಕಿ ಉಳಿಸಿಕೊಂಡರೆ ವಿಶ್ವವಿದ್ಯಾಲಯ ನಡೆಸುವುದು ಹೇಗೆ ಸಾಧ್ಯ? ವಿವಿಯಲ್ಲಿ ಸಂಶೋಧನೆಗಳು ನಿಂತು ಹೋಗುತ್ತಿವೆ. ವಿವಿಗೆ ಬಿಡುಗಡೆಯಾದ ಹಣಕಾಸಿನ ವಿಚಾರವಾಗಿ ಉನ್ನತ ಶಿಕ್ಷಣ ಸಚಿವರಿಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಅದು ತಪ್ಪು ಮಾಹಿತಿಯಾಗದಿದ್ದಲ್ಲಿ ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದರು.
ಬಿಜೆಪಿ ಸದದ್ಯ ಡಾ.ತಳವಾರ್ ಸಾಬಣ್ಣ ಮಾತನಾಡಿ, ಹಿಂದಿನ ಕುಲಪತಿಗಳು ನಡೆಸಿರುವ ಸುಮಾರು 600 ಕೋಟಿ ರೂ.ಗಳ ಕಾಮಗಾರಿಗಳಿಂದ ಕರ್ನಾಟಕ ವಿವಿಯ ಸಾಲದ ಹೊರೆ ಹೆಚ್ಚಾಗಿದೆ. ಕುಲಪತಿಗಳು ಹಣಕಾಸು ಇಲಾಖೆಗೆ ಹೋದರೆ ಕಾಯುವ ಪರಿಸ್ಥಿತಿ ಬಂದಿದೆ. ಕುಲಪತಿಗಳು ಆರ್ಥಿಕ ಇಲಾಖೆ ಮುಂದೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್‍ನ ಸದಸ್ಯ ಜಗದೀಶ್ ಶೆಟ್ಟರ್, ಕರ್ನಾಟಕ ವಿವಿಯ ಆಡಳಿತ ವ್ಯವಸ್ಥೆ ಅಧೋಗತಿಗೆ ತಲುಪಿದೆ. ಅಲ್ಲಿನ ಪರಿಸ್ಥಿತಿ ಅಯೋಮಯವಾಗಿದೆ. ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ಸರಕಾರಕ್ಕೆ ಮನವಿ ಮಾಡಿದ್ದೆ. ಆದರೆ ಸರಕಾರ ಗಮನಹರಿಸಲಿಲ್ಲ. ಈಗ ಸಭೆ ಕರೆದು ಸಮಸ್ಯೆ ಬಗೆಹರಿಸಿ ಎಂದು ಉನ್ನತ ಶಿಕ್ಷಣ ಸಚಿವರಿಗೆ ಸಲಹೆ ನೀಡಿದರು.