ರಾಜ್ಯದಲ್ಲಿ ಭದ್ರತಾ ಸಿಬ್ಬಂದಿಯ ಕೊರತೆಯಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದಲ್ಲಿ ಅಗತ್ಯವಾದ ಭದ್ರತೆ ಸಿಬ್ಬಂದಿ ಇದ್ದು, ಯಾವುದೇ ರೀತಿಯ ಕೊರತೆಯಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಗತ್ಯವಾದ ಭದ್ರತಾ ಸಿಬ್ಬಂದಿ ಇದೆ. ಇರುವ ಸಿಬ್ಬಂದಿಯನ್ನು ಕಡಿಮೆ ಮಾಡಿಲ್ಲ. ಆ ಸಂಖ್ಯೆ ಹಾಗೆಯೇ ಇದೆ. ಹೆಚ್ಚುವರಿಯಾಗಿ ನೇಮಕಾತಿ ಮಾಡಿಕೊಳ್ಳಬೇಕು ಎನ್ನುವ ಪ್ರಸ್ತಾವನೆಯೂ ಇದೆ. ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಪಹಲ್ಗಾಮ್‌ನಲ್ಲಿ ಉಗ್ರಗಾಮಿಗಳ ದಾಳಿ ಬಳಿಕ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದಿಂದ ಕೆಲವು ನಿರ್ದೇಶನಗಳು ಬಂದಿವೆ. ಮೂರು ಜಿಲ್ಲೆಗಳನ್ನು ಆಯ್ಕೆ ಮಾಡಿದ್ದಾರೆ. ಮಾಕ್ ಡ್ರಿಲ್ ಮಾಡುತ್ತಾರೆ. ಹೆಚ್ಚುವರಿಯಾಗಿ ಮೈಸೂರು ಜಿಲ್ಲೆಯನ್ನು ಇದಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ. ಇಂಟಲಿಜೆನ್ಸ್ ಮಾಹಿತಿ ಮತ್ತು ಇನ್ನಿತರ ಕಾರಣಗಳಿಂದ ಆಯ್ಕೆ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಪರಿಸ್ಥಿತಿಯ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ತಿಳಿಸಲಾಗಿದೆ ಎಂದು ಹೇಳಿದರು.
ಸಂಪುಟದಲ್ಲಿ ಜಾತಿಗಣತಿ ಚರ್ಚೆ ಆಗಬಹುದು. ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಇನ್ನು ಬಂದಿಲ್ಲ. ಮಧ್ಯಾಹ್ನದ ನಂತರ ಗೊತ್ತಾಗಲಿದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.