×
Ad

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ?

Update: 2025-05-28 21:44 IST

ಗೌರಿ ಲಂಕೇಶ್

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ ಹಾಕುತ್ತಿರುವುದಾಗಿ ತಿಳಿದು ಬಂದಿದೆ.

ಪ್ರಕರಣದ ಸಾಕ್ಷಿದಾರರೊಬ್ಬರಿಗೆ ಬುಧವಾರದಂದು ಬೆದರಿಕೆ ಹಾಕಲಾಗಿದೆ. ಇವತ್ತು ಕೋರ್ಟಿಗೆ ವಿಚಾರಣೆಗೆ ಬಂದ ಸಾಕ್ಷಿಯೊಬ್ಬರು ತನಗೆ ಪ್ರಾಸಿಕ್ಯೂಷನ್‌ಗೆ ವಿರುದ್ಧವಾಗಿ ಹೇಳಿಕೆ ನೀಡುವಂತೆ ಬೆದರಿಕೆ ಕರೆ ಬಂದಿತೆಂದು ದೂರು ಕೊಟ್ಟಿದ್ದಾರೆ. ವಕೀಲರು ಈ ವಿಚಾರವನ್ನು ಕೋರ್ಟಿನ ಗಮನಕ್ಕೆ ತಂದಿರುವುದಾಗಿ ತಿಳಿದು ಬಂದಿದೆ.

ಸಾಕ್ಷಿದಾರರು ಕೋರ್ಟ್‌ಗೆ ಕೊಟ್ಟ ದೂರಿನಲ್ಲಿ, "ನಿನ್ನೆ ಬಸ್ಸಿನಲ್ಲಿ ಬರುವಾಗ ಒಂದು ಫೋನ್‌ ಬಂದಿದೆ. ನೀನು ಕೋರ್ಟ್‌ಗೆ ಹೋದಾಗ ನಿನ್ನ ಮುಂದೆ ನಾಲ್ಕು ಮಂದಿ ಇರುತ್ತಾರೆ. ಅವರಿಗೆ ನನಗೆ ಗುರುತು ಇಲ್ಲ ಎಂದು ಹೇಳುವಂತೆ ಫೋನ್‌ ಬಂದಿದೆ" ಎಂದು ಉಲ್ಲೇಖಿಸಿದ್ದಾರೆ. 

ಬಲಪಂಥೀಯ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಗೌರಿ ಲಂಕೇಶ್ 2017ರ ಸೆ.5ರಂದು ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊಲೆಯಾದರು. ಮೋಟಾರ್ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಗೌರಿ ಲಂಕೇಶ್ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೂ ಸುಮಾರು 17 ಆರೋಪಿಗಳನ್ನು ಗುರುತಿಸಲಾಗಿದೆ.

ಪ್ರಕರಣ ಸಂಬಂಧ 2024ರ ಅಕ್ಟೋಬರ್ ತಿಂಗಳಲ್ಲಿ ಅಮೂಲ್ ಕಾಳೆ, ರಾಜೇಶ್ ಡಿ ಬಂಗೇರಾ, ವಾಸುದೇವ್ ಸೂರ್ಯವಂಶಿ, ರುಷಿಕೇಶ್ ದೇವ್ಡೇಕರ್, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ರಾಮಚಂದ್ರ ಬುಡ್ಡಿ ಮತ್ತು ಮನೋಹರ್ ದುಂಡೀಪ ಯಡವೆಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಅಲ್ಲದೆ, ಆರೋಪಿಗಳಾದ ಭರತ್ ಕುರಾನೆ, ಶ್ರೀಕಾಂತ್ ಪಂಗರ್ಕರ್, ಸುಜಿತ್ ಕುಮಾರ್ ಮತ್ತು ಸುಧನ್ವಗೆ 2024ರ ಸೆ.4ರಂದು, 11ನೇ ಆರೋಪಿ ಎನ್ ಮೋಹನ್ ನಾಯಕ್ ಅಲಿಯಾಸ್ ಸಂಪಜೆ ಎಂಬುವರಿಗೆ 2023ರ ಡಿಸೆಂಬರ್ 7ರಂದು, ಅಮಿತ್ ದಿಗ್ವೇಕರ್, ಕೆ.ಟಿ.ನವೀನ್ ಕುಮಾರ್ ಮತ್ತು ಸುರೇಶ್ ಹೆಚ್.ಎಲ್ ಅವರಿಗೆ ಜುಲೈ 16ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶಿಸಿತ್ತು. 2025ರ ಜನವರಿ ವೇಳೆಗೆ ಈ ಎಲ್ಲ 17 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News