ಸರಗಳ್ಳತನ, ಮನೆ ಕಳವು ಮಾಡುತ್ತಿದ್ದ ಮೂವರು ಆರೋಪಿಗಳ ಸೆರೆ: 625 ಗ್ರಾಂ ಚಿನ್ನಾಭರಣ ಜಪ್ತಿ
ಬೆಂಗಳೂರು, ಅ.31: ಸರಗಳ್ಳತನ ಹಾಗೂ ಮನೆ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಮಲ್ಲೇಶ್ವರಂ ಪೊಲೀಸರು, ಬಂಧಿತರಿಂದ 33.12 ಲಕ್ಷ ಬೆಲೆ ಬಾಳುವ 625 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.
ಜಯನಗರದ ನಾಲ್ಕನೇ ಬ್ಲಾಕ್ ಮುಹಮ್ಮದ್ ಜಬೀವುದ್ದೀನ್(32) ಮುಹಮ್ಮದ್ ಮುಮ್ತಾಬ್(26) ಹಾಗೂ ಮಾದನಾಯ್ಕನಹಳ್ಳಿಯ ಜಗದೀಶ್ ಕುಮಾರ್ ಯಾನೆ ಜಗ್ಗ(38) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಲ್ಲೇಶ್ವರಂನ 8ನೇ ಕ್ರಾಸ್‍ನಲ್ಲಿ 64 ವರ್ಷದ ವೃದ್ಧೆಯೊಬ್ಬರು ಅ.21ರಂದು ಸಂಜೆ ವಾಯು ವಿಹಾರದಲ್ಲಿದ್ದಾಗ ಆರೋಪಿಗಳು ಹಿಂಭಾಗದಿಂದ ಬಂದು, ಅವರ ಕತ್ತಿನಲ್ಲಿದ್ದ ಸುಮಾರು 30 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು. ಈ ಸಂಬಂಧ ವೃದ್ಧೆಯು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿದ ಮಲ್ಲೇಶ್ವರಂ ಪೊಲೀಸ್ ಇನ್‍ಸ್ಪೆಕ್ಟರ್ ಬಿ.ಆರ್.ಜಗದೀಶ್ ಮತ್ತವರ ಸಿಬ್ಬಂದಿ ತನಿಖೆ ಕೈಗೊಂಡು ಕೃತ್ಯ ನಡೆದ ಸ್ಥಳದ ಅಕ್ಕಪಕ್ಕ ರಸ್ತೆಯಲ್ಲಿ ಸಿ.ಸಿ.ಕ್ಯಾಮರಾಗಳನ್ನು ಪರಿಶೀಲಿಸಿ, ಕೃತ್ಯವೆಸಗಿದ ಆರೋಪಿಗಳ ಚಹರೆ ಪಡೆದುಕೊಂಡು ಪರಿಶೀಲಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿ 26.5 ಲಕ್ಷ ರೂ. ಮೌಲ್ಯದ 503 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಅ.22ರಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿ ಆತನಿಂದ ಸುಮಾರು 6.5 ಲಕ್ಷ ರೂ. ಮೌಲ್ಯದ 122 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು.
ಬಂಧಿತ ಆರೋಪಿಗಳು 12 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿ 95ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಹಲವು ಬಾರಿ ಜೈಲಿಗೆ ಹೋಗಿ ಬಂದಿರುವುದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳ ಬಂಧನದಿಂದ ಮಲ್ಲೇಶ್ವರಂನಲ್ಲಿ 2 ಕನ್ನಾ ಕಳವು, 1 ಸುಲಿಗೆ, 1 ಸಾಮಾನ್ಯ ಕಳವು, ಡಿ.ಜೆ.ಹಳ್ಳಿಯಲ್ಲಿ 1 ಸಾಮಾನ್ಯ ಕಳವು ಪ್ರಕರಣ, ಮಹಾಲಕ್ಷ್ಮೀಲೇಔಟ್, ಯಶವಂತಪುರ, ರಾಜಗೋಪಾಲನಗರ, ಗಿರಿನಗರದಲ್ಲಿ ಒಂದೊಂದು ಮನೆ ಕಳವು ಪ್ರಕರಣ ಸೇರಿ 9 ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದ್ದಾರೆ.