ಸಕಲೇಶಪುರ | ಸಾರಿಗೆ ಇಲಾಖೆಯ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟುಹಬ್ಬ ಆಚರಿಸಿದ ಮೂವರು ಸಿಬ್ಬಂದಿ ಅಮಾನತು
ಬೆಂಗಳೂರು : ಸಾರಿಗೆ ಇಲಾಖೆಯ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟಿದ ಹಬ್ಬ ಆಚರಿಸಿದ ಇಲಾಖೆಯ ಮೂವರು ಸಿಬ್ಬಂದಿಗಳನ್ನು ಸೋಮವಾರದಂದು ಅಮಾನತು ಮಾಡಲಾಗಿದೆ. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎನ್. ಮಧುರ, ಅಧೀಕ್ಷಕ ಎಂ.ಕೆ. ಗಿರೀಶ್ ಮತ್ತು ಮೋಟಾರು ವಾಹನ ನಿರೀಕ್ಷಕ ಎನ್.ಆರ್ ಅವರನ್ನು ಅಮಾನತುಗೊಂಡಿದ್ದಾರೆ.
ಜು.11ರಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಕಲೇಶಪುರ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟುಹಬ್ಬವನ್ನು ಆಚರಿಸಿದ ವೀಡಿಯೋ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಸರಕಾರಿ ಅಧಿಕಾರಿಗೆ ತರವಲ್ಲದ ರೀತಿಯಲ್ಲಿ ವರ್ತನೆ ತೋರಿದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರುಗಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎನ್. ಮಧುರ, ಅಧೀಕ್ಷಕ ಎಂ.ಕೆ. ಗಿರೀಶ್ ಮತ್ತು ಮೋಟಾರು ವಾಹನ ನಿರೀಕ್ಷಕ ಎನ್.ಆರ್. ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ವಿವರಣೆಯು ಸಮರ್ಪಕವಾಗಿಲ್ಲದ ಕಾರಣ, ಸಾರಿಗೆ ಇಲಾಖೆಯ ಆಯುಕ್ತರು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.