ಬೆಂಗಳೂರು | ಉಗ್ರರೊಂದಿಗೆ ನಂಟು ಆರೋಪ: ವೈದ್ಯ ನಾಗರಾಜ್ ಸಹಿತ ಮೂವರು 6 ದಿನ ಎನ್‌ಐಎ ಕಸ್ಟಡಿಗೆ
ಸಾಂದರ್ಭಿಕ ಚಿತ್ರ (Photo: PTI)
ಬೆಂಗಳೂರು:ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಮನೋವೈದ್ಯ ನಾಗರಾಜ್, ಎಎಸ್‌ಐ ಚಾಂದ್ ಪಾಷಾ ಸಹಿತ ಮೂವರನ್ನು ಆರು ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾರ್ಯ ನಿರ್ವಹಿಸುವ ಮನೋವೈದ್ಯ ನಾಗರಾಜ್, ಎಎಸ್ಸೈ ಚಾಂದ್ ಪಾಷಾ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್‌ರ ತಾಯಿ ಅನೀಸ್ ಫಾತಿಮಾ ಎಂಬವರನ್ನು ಜುಲೈ 14ರವರೆಗೆ ಕಸ್ಟಡಿಗೆ ನೀಡಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್‌ಐಎ ವಿಶೇಷ ಕೋರ್ಟ್ ಆದೇಶಿಸಿದ್ದು, ಪ್ರಕರಣ ಸಂಬಂಧ ಅಧಿಕಾರಿಗಳು ತನಿಖೆ ಇನ್ನಷ್ಟು ತೀವ್ರಗೊಳಿಸಲಿದ್ದಾರೆ.
ಈ ಪ್ರಕರಣದಲ್ಲಿ ನಾಗರಾಜ್ ಅವರು ನಾಲ್ಕು ವರ್ಷಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉಗ್ರ ಸಂಘಟನೆಯೊಂದರ ದಕ್ಷಿಣ ಭಾರತದ ಮುಖ್ಯಸ್ಥ ಎನ್ನಲಾದ ಟಿ.ನಾಸೀರ್, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ಹಾಗೂ ಇತರ ಕೈದಿಗಳಿಗೆ ಮೊಬೈಲ್‌ಗಳನ್ನು ಪೂರೈಸುತ್ತಿದ್ದರು. ಅವರಿಗೆ ಸಹಾಯಕಿ ಪವಿತ್ರಾ ಸಹಾಯ ಮಾಡುತ್ತಿದ್ದರು ಎಂಬ ಆರೋಪದಲ್ಲಿ ಮಂಗಳವಾರ ಎನ್‌ಐಎ ತನಿಖಾ ತಂಡ ಬಂಧಿಸಿದೆ ಎಂದು ತಿಳಿದುಬಂದಿದೆ.
ಇನ್ನೂ ಎಸ್ಕಾರ್ಟ್ ವಿಭಾಗದ ಎಸ್ಸೈ ಚಾಂದ್ ಪಾಷಾ 2022ರಿಂದ ಟಿ.ನಾಸೀರ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಆರೋಪಿಯನ್ನು ಬೆಂಗಳೂರು, ಕೇರಳ ಹಾಗೂ ಇತರ ರಾಜ್ಯಗಳ ಕೋರ್ಟ್‌ಗೆ ಕರೆದೊಯ್ಯುವ ಮಾಹಿತಿಯನ್ನು ಸಂಘಟನೆಯ ಕೆಲವು ವ್ಯಕ್ತಿಗಳು ಹಾಗೂ ಮುಂಗಡವಾಗಿ ಟಿ.ನಾಸೀರ್‌ಗೂ ನೀಡುತ್ತಿದ್ದರು. ಅದಕ್ಕಾಗಿ ಸಂಘಟನೆಯಿಂದ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.
ಸತೀಶ್ ಗೌಡ ನಾಪತ್ತೆ:
ಕೋಲಾರ ತಾಲೂಕು ಭಟ್ರಹಳ್ಳಿ ಗ್ರಾಮದ ಸತೀಶ್ ಗೌಡ ಎಂಬವರ ಮನೆಯನ್ನು ಹುಡುಕಾಡಿರುವ ಎನ್‌ಐಎ ಅಧಿಕಾರಿಗಳು, ಎನ್‌ಐಎ ಬೆಂಗಳೂರಿನ ಕಚೇರಿಗೆ ಬರುವಂತೆ ನೋಟಿಸ್ ನೀಡಿ ತೆರಳಿದ್ದಾರೆ. 2023ರಲ್ಲೇ ಎನ್‌ಐಎ ಅಧಿಕಾರಿಗಳು ನೋಟಿಸ್ ನೀಡಿದ್ದರು ಎನ್ನಲಾಗಿದ್ದು, ಈಗಾಗಲೇ ಸತೀಶ್ ಗೌಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸತೀಶ್ ಗೌಡ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ.
ದುಬಾರಿ ಬೆಲೆಗೆ ಮೊಬೈಲ್ ಕೊಟ್ಟಿದ್ದ ವೈದ್ಯ?:
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಮೂಲದ ಮನೋವೈದ್ಯ ಡಾ.ನಾಗರಾಜ್ ಕೂಡಾ ಟಿ.ನಾಸೀರ್ ಜೊತೆಗೆ ಸಂಪರ್ಕ ಹೊಂದಿದ್ದು ಆತನಿಗೆ ಬೇರೆ ಬೇರೆ ಮೂಲಗಳಿಂದ ಹಣ ಸಂಗ್ರಹ ಮಾಡಲು ಬೇಕಾದ ಫೋನ್, ಸಿಮ್ ಕಾರ್ಡ್ ಇನ್ನಿತರ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದ ಎನ್ನಲಾಗಿದೆ.
ಅದು ಅಲ್ಲದೆ, 10 ಸಾವಿರ ರೂ. ಬೆಲೆಯ ಮೊಬೈಲ್ ಫೋನ್ ನನ್ನು 50 ಸಾವಿರ ರೂ.ಗೆ ನಾಸೀರ್‌ಗೆ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.