GST ನೋಟೀಸ್ ಬಂದಿರುವ ವ್ಯಾಪಾರಿಗಳು ತೆರಿಗೆ ಇಲಾಖೆಗೆ ವಿವರಣೆ ನೀಡಿದರೆ ಸಮಸ್ಯೆ ಪರಿಹಾರವಾಗಲಿದೆ: ವಾಣಿಜ್ಯ ತೆರಿಗೆ ಇಲಾಖೆ
Image Credit :Freepik
ಬೆಂಗಳೂರು: ಜಿಎಸ್ ಟಿ ನೋಟೀಸ್ ಬಂದಿರುವ ವ್ಯಾಪಾರಿಗಳು ಗೊಂದಲಕ್ಕೆ ಒಳಗಾಗದೇ, ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ತೆರಳಿ, ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡಿದರೆ ಸಮಸ್ಯೆ ಪರಿಹಾರವಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಇಲಾಖೆ, ಜಿ.ಎಸ್.ಟಿ ಸಂಬಂಧಿಸಿದ ನಿಯಮಗಳು ಮತ್ತು ಪರಿಹಾರಗಳನ್ನು ವ್ಯಾಪಾರಿಗಳಿಗೆ ಅಧಿಜಾರಿಗಳು ತಿಳಿಸಿ, ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳನ್ನು ಹೊರತುಪಡಿಸಿ ತೆರಿಗೆದಾಯಕ ವಹಿವಾಟಿಗೆ ಮಾತ್ರ ಅನ್ವಯಿಸುವ ದರಗಳ ಅನ್ವಯ ತೆರಿಗೆ ವಿಧಿಸುತ್ತಾರೆಂದು ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು ತಿಳಿಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಪ್ರಕರಣ 22 ರನ್ವಯ ಕೇವಲ ಸರಕುಗಳ ಪೂರೈಕೆದಾರರ ಸಮಗ್ರ ವಹಿವಾಟು ಹಣಕಾಸು ವರ್ಷದಲ್ಲಿ ನಗದು ರೂಪದಲ್ಲಾಗಲೀ, ಯು.ಪಿ.ಐ, ಪಿ.ಒ.ಒ.ಎಸ್ ಮೆಷಿನ್, ಬ್ಯಾಂಕ್ ಖಾತೆ ಹಾಗೂ ಇತರೆ ಯಾವುದೇ ವಿಧಾನಗಳಿಂದ 40 ಲಕ್ಷ ರೂ.ಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂ.ಗಳನ್ನು ಮೀರಿದರೆ ಅಂತಹ ವರ್ತಕರು ಜಿ.ಎಸ್.ಟಿ ನೋಂದಣಿ ಕಡ್ಡಾಯವಾಗಿರುತ್ತದೆ ಎಂದು ಹೇಳಿದ್ದಾರೆ.
ಸಮಗ್ರ ವಹಿವಾಟಿನಲ್ಲಿ ತೆರಿಗೆ ವಿಧಿಸಬಹುದಾದ (Taxable) ಮತ್ತು ತೆರಿಗೆ ವಿನಾಯಿತಿ ಪಡೆದ (Exempted) ಸರಕು ಮತ್ತು ಸೇವೆಗಳು ಸೇರಿರುತ್ತವೆ. ವರ್ತಕರು ಜಿ.ಎಸ್.ಟಿ. ಅಡಿಯಲ್ಲಿ ಸಾಮಾನ್ಯ (Regular) ನೋಂದಣಿ ಪಡೆದಿದ್ದೇ ಆದರೆ ತೆರಿಗೆ ಬಾಧ್ಯತೆಯು ತೆರಿಗೆ ವಿಧಿಸಬಹುದಾದ (Taxable) ಸರಕು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ನೋಂದಾಯಿತ ವರ್ತಕರು ತಾವು ಖರೀದಿಸಿದ ವಸ್ತುಗಳ ಮೇಲೆ ಹೂಡುವಳಿ (Input Tax) ತೆರಿಗೆಯನ್ನು ಮಾರಾಟದ ಮೇಲೆ ಪಾವತಿಸಬೇಕಾದ ತೆರಿಗೆಗೆ ಹೊಂದಾಣಿಕೆ ಮಾಡಿಕೊಂಡು ನಿವ್ವಳ ತೆರಿಗೆಯನ್ನು ಪಾವತಿಸಬೇಕು. ಆದುದರಿಂದ ಮೌಲ್ಯವರ್ಧನೆಯ ಮೇಲೆ ಪಾವತಿಸಬೇಕಾದ ತೆರಿಗೆ ಮೊತ್ತವು ಅಲ್ಪ ಪ್ರಮಾಣದಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೇ ವ್ಯಾಪಾರಿಗಳು ತಮ್ಮ ವಾರ್ಷಿಕ ವಹಿವಾಟು 1.50 ಕೋಟಿ ರೂ.ಗಿಂತ ಕಡಿಮೆ ಇದ್ದಲ್ಲಿ ಜಿ.ಎಸ್.ಟಿ ಅಡಿ ನೋಂದಣಿಯನ್ನು ಪಡೆದು ರಾಜಿ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡು ವಹಿವಾಟಿನ ಮೇಲೆ ಶೇ 0.5 ಎಸ್.ಜಿ.ಎಸ್.ಟಿ ತೆರಿಗೆಯನ್ನು ಪಾವತಿಸಬಹುದು. ಆದರೆ ನೋಂದಣಿ ಪಡೆಯದೇ ನೆಡೆಸಿರುವ ವಹಿವಾಟಿಗೆ ರಾಜಿ ತೆರಿಗೆ ಪದ್ಧತಿಯು ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ವರ್ತಕರಲ್ಲಿ ಸೂಕ್ತ ಮಾರ್ಗದರ್ಶನ, ಸಹಕಾರ ಹಾಗೂ ಅರಿವು ಮೂಡಿಸಲು ಸೂಚಿಸಲಾಗಿದೆ. ಹಾಗೂ ಹೊಸದಾಗಿ ನೀಡಲಾಗುವ ನೋಂದಣಿಯನ್ನು ತೆರಿಗೆದಾರರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಸುಸೂತ್ರವಾಗಿ ನೀಡಲು ಸಹ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 98,915 ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ನೋಂದಣಿ ಪಡೆದು ವ್ಯಾಪಾರ ನಡೆಸುತ್ತಿರುತ್ತಾರೆ. ಈಗಾಗಲೇ ವಾರ್ಷಿಕ ವಹಿವಾಟು 40 ರೂ. ಲಕ್ಷಗಳು (ಸರಕುಗಳ ಪೂರೈಕೆದಾರರು), 20 ಲಕ್ಷಗಳು ರೂ. (ಸೇವೆಗಳ ಪೂರೈಕೆದಾರರು) ಮೀರಿರುವ ನೋಂದಣಿ ಪಡೆಯದೇ ಇರುವ ವರ್ತಕರಿಗೆ ನೋಟೀಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ನೋಂದಾಯಿತ ವರ್ತಕರು ಇನ್ನು ಮುಂದೆ ರಾಜಿ ತೆರಿಗೆ ಪದ್ಧತಿಯಡಿ ಶೇ. 1 ರಂತೆ ತೆರಿಗೆ ಪಾವತಿಸುವುದು ಕಷ್ಟಕರವಾಗಲಾರದು. ಈಗಾಗಲೇ ಶೇ. 90 ರಷ್ಟು ವರ್ತಕರು ರಾಜಿ ತೆರಿಗೆ ಪದ್ಧತಿಯಡಿ ತೆರಿಗೆ ಪಾವತಿಸುತ್ತಿರುವುದರಿಂದ ಉಳಿಕೆ ಶೇ. 10 ರಷ್ಟು ವರ್ತಕರು ತೆರಿಗೆ ಪಾವತಿಸದಿರುವುದು ತರವಲ್ಲ. ಜಿಎಸ್‌ಟಿ ಕಾಯ್ದೆಯು ಇಂತಹ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ನೋಟೀಸ್ ನೀಡಿದ ಬೆನ್ನಲ್ಲೇ ಕೆಲವು ವರ್ತಕರು ಯು.ಪಿ.ಐ ಮೂಲಕ ಹಣಪಡೆಯುವುದನ್ನು ನಿಲ್ಲಿಸಿ, ಗ್ರಾಹಕರಿಂದ ನಗದು ರೂಪದಲ್ಲಿ ಹಣ ಸ್ವೀಕರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ವರ್ತಕರು ತಾವು ಮಾಡಿದ ವಹಿವಾಟಿನ ಪ್ರತಿಫಲವನ್ನು ಯಾವುದೇ ರೂಪದಲ್ಲಿ ಪಡೆದಿದ್ದರೂ ಜಿ.ಎಸ್.ಟಿ. ತೆರಿಗೆ ಅನ್ವಯವಾಗುತ್ತದೆ. ಯುಪಿಐ ಈ ರೀತಿ ಪ್ರತಿಫಲ ಪಡೆಯುವ ಒಂದು ಮಾರ್ಗ ಮಾತ್ರ. ವರ್ತಕರು ಯಾವುದೇ ರೂಪದಲ್ಲಾಗಲೀ ವಹಿವಾಟು ನಡೆಸಿದ್ದಲ್ಲಿ ಅಂತಹ ವರ್ತಕರಿಂದ ಜಿ.ಎಸ್.ಟಿ ಕಾಯ್ದೆಯಡಿ ಅನ್ವಯಿಸುವ ತೆರಿಗೆಯನ್ನು ತೆಗೆದುಕೊಳ್ಳುತ್ತದೆ. ಸಂಗ್ರಹಿಸಲು ಇಲಾಖೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.